ರಾಜ್ಯದಲ್ಲಿ ಸಾಲು ಸಾಲು ಹಬ್ಬದ ಸಂಭ್ರಮ ಆರಂಭವಾಗಿದೆ. ಗಣೇಶ ಹಬ್ಬಕ್ಕೂ ಮುನ್ನ ಗೌರಿ ಹಬ್ಬ ಆಗಮಿಸಲಿದೆ. ಹೆಣ್ಣುಮಕ್ಕಳ ನೆಚ್ಚಿನ ಹಬ್ಬ ಇದಾಗಿದ್ದು, ಜೋರು ಶಾಪಿಂಗ್ ನಡೆದಿದೆ. ತಾವೂ ಅಂದದಿ ತಯಾರಾಗಿ, ದೇವಿಯನ್ನೂ ಅಲಂಕರಿಸಿ ಸಂಪ್ರದಾಯಿಕ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಇದಕ್ಕಾಗಿ ಬಗೆಬಗೆಯ ಹೂವು, ಹಣ್ಣುಗಳನ್ನು ಖರೀದಿ ಮಾಡಲಾಗುತ್ತಿದೆ. ಗೌರಿ ಹಬ್ಬದ ಆಚರಣೆ ಮಾಡುವುದು ಹೇಗೆ? ಇದರ ಕಥೆ ಏನು? ಇತಿಹಾಸ ಏನು ಇಲ್ಲಿದೆ ಸಂಪೂರ್ಣ ಮಾಹಿತಿ..
ಹೆಣ್ಣುಮಕ್ಕಳಿಗೆ ಯಾಕೆ ದೊಡ್ಡ ಹಬ್ಬ?
ಈ ಹಿಂದೆ ಮದುವೆಯಾಗಿ ಗಂಡನ ಮನೆಗೆ ಹೋಗುತ್ತಿದ್ದ ಹೆಣ್ಣುಮಕ್ಕಳು ಮತ್ತೆ ತವರಿಗೆ ಬರುತ್ತಿದ್ದುದು ಗೌರಿ ಹಬ್ಬಕ್ಕೆಂದೇ. ತವರು ಮನೆಯಿಂದ ಯಾರಾದರೂ ಗಂಡನ ಮನೆಗೆ ಆಗಮಿಸಿ ತಮ್ಮ ಮನೆಯ ಮಗಳನ್ನು ಹಬ್ಬಕ್ಕೆ ಕಳಿಸಿಕೊಡಿ ಎಂದು ಕೇಳುತ್ತಾರೆ. ಆಗ ಗಂಡನ ಮನೆಯವರು ಸೊಸೆ ಗೌರಿಯನ್ನು ತವರು ಮನೆಗೆ ಕಳಿಸಿಕೊಡುತ್ತಾರೆ. ಮಗಳು ಆಡಿ ಬೆಳೆದ ಮನೆಗೆ ಮತ್ತೆ ಬಂದಾಗ ಹಬ್ಬ ಗಳೆಗಟ್ಟುತ್ತದೆ. ಪ್ರೀತಿಯ ತವರಿಗೆ ಹೋಗುವ ಹಬ್ಬ ಇದಾದ ಕಾರಣ ಹೆಣ್ಣುಮಕ್ಕಳಿಗೆ ಈ ಹಬ್ಬ ಅಚ್ಚುಮೆಚ್ಚು. ತನ್ನ ತವರಿಗೂ, ಗಂಡನ ಮನೆಗೂ ಒಳಿತಾಗಲಿ ಎಂದು ಶ್ರದ್ಧೆಯಿಂದ ದೇವಿಯನ್ನು ಬೇಡಿಕೊಳ್ಳಲಾಗುತ್ತದೆ. ಗೌರಿ ಹಬ್ಬದಂದು ದೇವಿಯು ತವರು ಮನೆಗೆ ಬಂದಿರುತ್ತಾಳೆ ಎನ್ನುವ ನಂಬಿಕೆಯಿಂದ ಹಬ್ಬದ ಆಚರಣೆ ಮಾಡಲಾಗುತ್ತದೆ.

ಪುರಾಣದ ಕಥೆಯೇನು?
ಕೈಲಾಸದಲ್ಲಿರುವ ಶಿವ ದೇವರು ಹಾಗೂ ಗೌರಿ ಮಾತನಾಡುತ್ತಿರುತ್ತಾರೆ. ಆ ವೇಳೆ ಗೌರಿ ದೇವಿಯು ನಾನು ಜೀವನದಲ್ಲಿ ತೃಪ್ತಿ ಹೊಂದಿದ್ದೇನೆ. ನಿಮ್ಮ ಜೊತೆಗೆ ಇರಲು ನನಗೆ ಖುಷಿಯಿದೆ. ಆದರೆ ನನಗೆ ಒಮ್ಮೆ ತವರು ಮನೆಗೆ ಹೋಗಬೇಕು ಎನ್ನಿಸುತ್ತಿದೆ ಎಂದು ಕೇಳಿಕೊಳ್ಳುತ್ತಾಳೆ. ಆಗ ಶಿವನು ತವರಿಗೆ ಏಕೆ ಹೋಗಬೇಕು, ನಿಮಗೆ ಬೇಕಿರುವ ಎಲ್ಲವೂ ಇಲ್ಲಿಯೇ ಇದೆಯಲ್ಲವೆ ಎಂದು ಹೇಳುತ್ತಾರೆ. ಅದಕ್ಕೆ ಗೌರಿ ದೇವಿಯು ಎಲ್ಲವೂ ಇದೆ ಆದರೆ ಹೆಣ್ಣಿಗೆ ತವರಿಗೆ ಆಸೆ ಸಾಯುವವರೆಗೂ ಇರುವಂಥದ್ದೇ ಎಂದು ಉತ್ತರಿಸುತ್ತಾಳೆ. ಶಿವ ದೇವರು ಸರಿ ಹಾಗಿದ್ದರೆ ನಿನ್ನ ತವರನ್ನು ಇಲ್ಲಿಗೇ ಕರೆಸೋಣ ಎಂದು ಹೇಳುತ್ತಾರೆ. ಆಗ ಗೌರಿದೇವಿಯು ಇಲ್ಲ, ನಾನು ಹುಟ್ಟಿ, ಆಡಿ, ಬೆಳೆದ ಜಾಗ ನನ್ನ ತವರು ಮನೆಗೆ ಹೋಗಬೇಕು. ಭಾದ್ರಪದ ಮಾಸದಲ್ಲಿ ಒಂದು ದಿನ ನನ್ನ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳುತ್ತಾಳೆ. ಅದಕ್ಕೆ ಶಿವ ಒಪ್ಪುತ್ತಾರೆ. ಗೌರಿ ದೇವಿಯು ತವರಿಗೆ ಬಂದು ಹೋಗುವ ದಿನವನ್ನು ಗೌರಿ ಹಬ್ಬವನ್ನಾಗಿ ಆಚರಣೆ ಮಾಡಲಾಗುತ್ತದೆ.

ಗಣೇಶನೂ ಭೂಮಿಗೆ ಬರುತ್ತಾನೆ
ಅಮ್ಮನನ್ನು ಬಿಟ್ಟಿರಲು ಕಷ್ಟಪಡುವ ಗಣೇಶ ದೇವನು, ತಾಯಿ ಗೌರಿಯನ್ನು ಹುಡುಕಿಕೊಂಡು ಅಜ್ಜಿಯ ಮನೆ ಅಂದರೆ ಗೌರಿ ತಾಯಿಯ ತವರಿಗೆ ಆಗಮಿಸುತ್ತಾನೆ. ಅಮ್ಮನನ್ನು ವಾಪಾಸ್ ತನ್ನ ಜೊತೆ ಕರೆದುಕೊಂಡು ಹೋಗಲು ಗಣೇಶ ಭೂಮಿಗೆ ಬರುವ ದಿನವನ್ನು ಗಣೇಶ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಇದೇ ಕಾರಣದಿಂದ ಗೌರಿ-ಗಣೇಶ ಹಬ್ಬ ಒಟ್ಟಿಗೇ ಆಗಮಿಸುತ್ತದೆ.



