September 13, 2026
Sunday, September 13, 2026
spot_img

ED, IT ದಾಳಿ ರಾಜಕೀಯ ಪ್ರೇರಿತ: ಸಚಿವ ಶರಣಪ್ರಕಾಶ್ ಪಾಟೀಲ್ ಗಂಭೀರ ಆರೋಪ

ಹೊಸದಿಗಂತ ವರದಿ ಗದಗ:

ವಿರೋಧ ಪಕ್ಷದ ನಾಯಕರನ್ನು ಬೆದರಿಸಿ ಬಗ್ಗುಬಡಿಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ (ED) ಹಾಗೂ ಆದಾಯ ತೆರಿಗೆ ಇಲಾಖೆ (IT) ಸೇರಿದಂತೆ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಆರೋಪಿಸಿದರು.

ಗದಗನಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದಲ್ಲಿರುವ ನಾಯಕರಿಗೆ ತನಿಖಾ ಸಂಸ್ಥೆಗಳ ಮೂಲಕ ನಿರಂತರವಾಗಿ ತೊಂದರೆ ನೀಡಲಾಗುತ್ತಿದೆ. ಕಳೆದ ಹತ್ತು ವರ್ಷಗಳಿಂದ ಇದೇ ರೀತಿಯ ರಾಜಕೀಯ ಚಾಳಿ ಮುಂದುವರಿದಿದೆ ಎಂದು ಟೀಕಿಸಿದರು.

“ತನಿಖಾ ಸಂಸ್ಥೆಗಳ ದಾಳಿಗಳ ಇತಿಹಾಸವನ್ನು ತೆಗೆದು ನೋಡಿದರೆ ಶೇ.97ರಷ್ಟು ಪ್ರಕರಣಗಳು ವಿರೋಧ ಪಕ್ಷದ ನಾಯಕರನ್ನೇ ಗುರಿಯಾಗಿಸಿಕೊಂಡಿವೆ. ಬಿಜೆಪಿ ನಾಯಕರ ವಿರುದ್ಧ ಇದೇ ರೀತಿ ED, IT ಅಥವಾ ಇತರೆ ತನಿಖಾ ಸಂಸ್ಥೆಗಳ ತನಿಖೆ ನಡೆದಿದೆಯೇ?” ಎಂದು ಪ್ರಶ್ನಿಸಿದರು.

ಪ್ರಜಾಪ್ರಭುತ್ವಕ್ಕೆ ಧಕ್ಕೆ

“ಇದು ಸಂಪೂರ್ಣ ರಾಜಕೀಯ ಪ್ರೇರಿತ ಕ್ರಮ. ವಿರೋಧ ಪಕ್ಷದವರನ್ನು ಬಗ್ಗುಬಡಿಯಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತರುವ ಕೆಲಸ. ಮೋದಿ ಸರ್ಕಾರ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ”ಎಂದು ಆರೋಪಿಸಿದರು.

ಜೆನ್-ಜಿ ವಿಚಾರದ ನಂತರ ಕೇಂದ್ರ ಸರ್ಕಾರ ಸಂಪೂರ್ಣ ಹತಾಶಗೊಂಡಿದ್ದು, ವಿರೋಧ ಪಕ್ಷದ ನಾಯಕರ ವಿರುದ್ಧ ಇಂತಹ ಕ್ರಮಗಳಿಗೆ ಮುಂದಾಗುತ್ತಿದೆ ಎಂದು ಸಚಿವರು ಟೀಕಿಸಿದರು.

ಇದನ್ನೂ ಓದಿ:

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ

2019ರಿಂದ 2023ರವರೆಗೆ ಬಿಜೆಪಿ ಆಡಳಿತದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ರಾಜ್ಯದ ಜನರಿಗೆ ಎಲ್ಲವೂ ತಿಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕರು ಭ್ರಷ್ಟಾಚಾರದ ಕುರಿತು ಮಾತನಾಡುವ ನೈತಿಕ ಹಕ್ಕು ಹೊಂದಿಲ್ಲ ಎಂದು ಶರಣಪ್ರಕಾಶ್ ಪಾಟೀಲ ಹೇಳಿದರು.

ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, “ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಹೆಣದ ಮೇಲೂ ಹಣ ಮಾಡುವವರು ಬಿಜೆಪಿಯವರು. ನಮಗೆ ನೀತಿ ಪಾಠ ಹೇಳುವ ಅಗತ್ಯ ಬಿಜೆಪಿಗರಿಗೆ ಇಲ್ಲ”ಎಂದು ಕಿಡಿಕಾರಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !