ಹೊಸದಿಗಂತ ವರದಿ ಯಾದಗಿರಿ:
ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದ ಆರೋಪದ ಮೇಲೆ ಏಳು ಮಂದಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಆರೋಪಿಗಳಿಂದ ಆರು ನಾಡಬಂದೂಕುಗಳು, ನವಿಲಿನ ಮಾಂಸ, ಜೀವಂತ ಆಮೆಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಯಾದಗಿರಿ ಪ್ರಾದೇಶಿಕ ಅರಣ್ಯ ವಲಯದ ಅರಕೇರಾ (ಕೆ) ಶಾಖೆಯ ಮೋಟ್ನಳ್ಳಿ ಗಸ್ತಿನ ಬಗ್ಗಲುಮಡು ಸೆಕ್ಷನ್-4ರ ಸರ್ವೇ ನಂ. 30ರ ಅರಣ್ಯ ಪ್ರದೇಶದಲ್ಲಿ ಸೆ.11ರ ರಾತ್ರಿ ಈ ಕಾರ್ಯಾಚರಣೆ ನಡೆದಿದೆ.
ಅರಣ್ಯ ಇಲಾಖೆ ಕಚೇರಿಗೆ ಬಂದ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ಇಲಾಖೆಯ ವಾಹನದಲ್ಲಿ ರಾತ್ರಿ ಗಸ್ತು ನಡೆಸುತ್ತಿದ್ದರು. ಈ ವೇಳೆ ಅರಣ್ಯ ಪ್ರದೇಶದಲ್ಲಿ ಜನರ ಗುಂಪಿನ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆಗ ಏಳು ಮಂದಿ ಅಲ್ಲಿ ಇರುವುದನ್ನು ಪತ್ತೆಹಚ್ಚಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳನ್ನು ಬೇಟೆಯಾಡಿರುವುದಾಗಿ ತಿಳಿಸಿದ್ದಾರೆ ಎಂದು ಅರಣ್ಯ ಇಲಾಖೆ ವರದಿಯಲ್ಲಿ ತಿಳಿಸಲಾಗಿದೆ. ಸ್ಥಳದಲ್ಲಿ ಎರಡು ನವಿಲುಗಳನ್ನು ಬೇಟೆಯಾಡಿ ಸುಟ್ಟಿರುವುದು ಹಾಗೂ ಅವುಗಳ ಮಾಂಸ ಪತ್ತೆಯಾಗಿದ್ದು, ಎರಡು ಆಮೆಗಳು ಮತ್ತು 12 ಜೀವಿವಂತ ಏಡಿಗಳನ್ನು ಹಿಡಿದಿರುವುದು ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಏನೇನು ವಶ?
ಕಾರ್ಯಾಚರಣೆಯಲ್ಲಿ 2 ನವಿಲಿನ ಮಾಂಸ, 12 ಜೀವಿವಂತ ಏಡಿಗಳು 2 ಜೀವಂತ ಆಮೆಗಳು, 2 ಟಾರ್ಚ್ಗಳು, 1 ಕೊಡಲಿ, 6 ನಾಡಬಂದೂಕುಗಳು, ಗನ್ಪೌಡರ್ಗೆ ಸಂಬಂಧಿಸಿದ ವಸ್ತುಗಳು, ಮಾಂಸ ಬೇಯಿಸಲು ಬಳಸಿದ ಮಣ್ಣಿನ ಮಡಿಕೆ ಹಾಗೂ ಸ್ಟೀಲ್ ಪ್ಲೇಟ್ ಮತ್ತು 7 ಮೊಬೈಲ್ ಫೋನ್ಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ.



