Tuesday, September 16, 2025

ಯಾಕೆ ಹ್ಯಾಂಡ್ ಶೇಕ್ ಮಾಡಿಲ್ಲ ಎಂದು ಕೇಳಿದ ಪತ್ರಕರ್ತನಿಗೆ ಸೂರ್ಯಕುಮಾರ್‌ ಖಡಕ್ ಉತ್ತರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದುಬೈನಲ್ಲಿ ನಡೆದ ಏಷ್ಯಾ ಕಪ್ 2025ರ ಭಾರತ–ಪಾಕಿಸ್ತಾನ ಗುಂಪು ಹಂತದ ಪಂದ್ಯ ನಿನ್ನೆ (ಸೆಪ್ಟೆಂಬರ್ 14) ಭಾರತ ತಂಡದ ಭರ್ಜರಿ ಗೆಲುವಿನಿಂದ ಅಂತ್ಯಗೊಂಡಿತು. ಭಾರತವು ಈ ಹೈವೋಲ್ಟೇಜ್ ಪಂದ್ಯವನ್ನು 7 ವಿಕೆಟ್‌ಗಳಿಂದ ಸುಲಭವಾಗಿ ಗೆದ್ದು ತನ್ನ ಶಕ್ತಿಯನ್ನು ಸಾಬೀತುಪಡಿಸಿತು. ಆದರೆ ಪಂದ್ಯಾನಂತರ ಮೈದಾನದಲ್ಲಿ ನಡೆದ ಒಂದು ಘಟನೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನಿ ಆಟಗಾರರು ಕೈಕುಲುಕಲು ಕಾಯುತ್ತಿದ್ದರೂ ಟೀಮ್ ಇಂಡಿಯಾ ಆಟಗಾರರು ಯಾರೂ ಮುಂದೆ ಬರಲಿಲ್ಲ. ಈ ನಿರ್ಧಾರವನ್ನು ನಾಯಕ ಸೂರ್ಯಕುಮಾರ್ ಯಾದವ್ ಸ್ಪಷ್ಟವಾಗಿ ಸಮರ್ಥಿಸಿಕೊಂಡಿದ್ದಾರೆ.

ಪಾಕಿಸ್ತಾನಿ ಮಾಧ್ಯಮದ ಟೀಕೆ – ಅಭಿಮಾನಿಗಳ ಸಂತೋಷ
ಭಾರತೀಯ ಆಟಗಾರರು ಪಾಕಿಸ್ತಾನಿ ತಂಡದೊಂದಿಗೆ ಕೈಕುಲುಕದೆ ಮೈದಾನ ತೊರೆದಿರುವುದನ್ನು ಪಾಕಿಸ್ತಾನಿ ಮಾಧ್ಯಮ ಹಾಗೂ ಮಾಜಿ ಕ್ರಿಕೆಟಿಗರು ತೀವ್ರ ಟೀಕಿಸಿದ್ದಾರೆ. ಅವರು ಇದನ್ನು ಕ್ರೀಡಾ ಮನೋಭಾವದ ಅವಮಾನವೆಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಭಾರತೀಯ ಅಭಿಮಾನಿಗಳು ಮಾತ್ರ ಈ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ.

ಪಂದ್ಯ ಮುಗಿದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಈ ನಿರ್ಧಾರ ನಿಮ್ಮದೇನಾ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸೂರ್ಯಕುಮಾರ್, “ಜೀವನದಲ್ಲಿ ಕ್ರೀಡಾ ಮನೋಭಾವಕ್ಕಿಂತಲೂ ಕೆಲವು ವಿಷಯಗಳು ದೊಡ್ಡವು. ನಾವು ಇಲ್ಲಿಗೆ ಕ್ರಿಕೆಟ್ ಆಡಲು ಬಂದಿದ್ದೇವೆ ಮತ್ತು ಅದನ್ನೇ ಮಾಡಿದ್ದೇವೆ. ಈ ಗೆಲುವನ್ನು ಪಹಲ್ಗಾಮ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಹಾಗೂ ನಮ್ಮ ಸಶಸ್ತ್ರ ಪಡೆಗಳಿಗೆ ಸಮರ್ಪಿಸುತ್ತೇವೆ” ಎಂದು ಹೇಳಿದ್ದಾರೆ.

ಈ ಸೋಲಿನ ಬಳಿಕ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಎಷ್ಟು ಬೇಸರಗೊಂಡಿದ್ದರು ಅಂದ್ರೆ ಅವರು ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ಕಾರ್ಯಕ್ರಮಕ್ಕೂ ಹಾಜರಾಗಲಿಲ್ಲ. ಇದರಿಂದಾಗಿ ಪಾಕಿಸ್ತಾನ ತಂಡದ ನಿರಾಸೆ ಮತ್ತಷ್ಟು ಸ್ಪಷ್ಟವಾಯಿತು.

ಇದನ್ನೂ ಓದಿ