September 15, 2026
Tuesday, September 15, 2026
spot_img

ಮಾಸ್ ಕಮ್‌ಬ್ಯಾಕ್ ಅಂದ್ರೆ ಇದು! ಕ್ರಿಕೆಟ್ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆದ ಬ್ರೆಂಡನ್ ಟೇಲರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯ ಶುರುವಾಗ್ತಿದ್ದಂತೆ, ಜಿಂಬಾಬ್ವೆ ತಂಡದ ಹಿರಿಯ ಆಟಗಾರ ಬ್ರೆಂಡನ್ ಟೇಲರ್ ಮೈದಾನಕ್ಕೆ ಹೆಜ್ಜೆ ಇಟ್ಟಿದ್ದೇ ತಡ, ಇಡೀ ಕ್ರಿಕೆಟ್ ಜಗತ್ತೇ ತಿರುಗಿ ನೋಡುವಂತಹ ಒಂದು ವಿಶ್ವ ದಾಖಲೆ ಸೃಷ್ಟಿಯಾಗಿದೆ. ಇಷ್ಟು ದಿನ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹೆಸರಲ್ಲಿದ್ದ ಸಾರ್ವಕಾಲಿಕ ರೆಕಾರ್ಡ್ ಒಂದನ್ನು ಬ್ರೆಂಡನ್ ಟೇಲರ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕಾಲ ಸುದೀರ್ಘವಾಗಿ ಆಡಿದ ಆಟಗಾರರ ಪಟ್ಟಿಯಲ್ಲಿ 40 ವರ್ಷದ ಬ್ರೆಂಡನ್ ಟೇಲರ್ ಈಗ ನಂಬರ್-1 ಸ್ಥಾನಕ್ಕೇರಿದ್ದಾರೆ. ಟೇಲರ್ ಏಕದಿನ ಕ್ರಿಕೆಟ್ ಜರ್ನಿ ಆರಂಭವಾಗಿ ಇಂದಿಗೆ ಭರ್ತಿ 22 ವರ್ಷ 148 ದಿನಗಳು ಪೂರ್ಣಗೊಂಡಿವೆ. ಈ ಮೂಲಕ ಪುರುಷರ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಸುದೀರ್ಘ ಅವಧಿಗೆ ಆಡಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಮೊದಲು ಭಾರತದ ಕ್ರಿಕೆಟ್ ಸಾಮ್ರಾಟ ಸಚಿನ್ ತೆಂಡೂಲ್ಕರ್ ಅವರು ಬರೋಬ್ಬರಿ 22 ವರ್ಷ 91 ದಿನಗಳ ಕಾಲ ಏಕದಿನ ಕ್ರಿಕೆಟ್ ಆಡಿ ಪ್ರಥಮ ಸ್ಥಾನದಲ್ಲಿದ್ದರು. ಆದರೆ, ಆಸ್ಟ್ರೇಲಿಯಾ ವಿರುದ್ಧ ಇಂದಿನ ಪಂದ್ಯದಲ್ಲಿ ಟಾಸ್ ಮುಗಿಸಿ ಫೀಲ್ಡ್‌ಗೆ ಇಳಿಯುತ್ತಿದ್ದಂತೆ ಟೇಲರ್, ಸಚಿನ್ ಅವರ ಈ ಬೃಹತ್ ದಾಖಲೆಯನ್ನು ಮುರಿದು ಮುನ್ನುಗ್ಗಿದ್ದಾರೆ.

2004ರಲ್ಲಿ ಶ್ರೀಲಂಕಾ ವಿರುದ್ಧ ಕೇವಲ 18 ವರ್ಷದ ಹುಡುಗನಾಗಿ ಪಾದಾರ್ಪಣೆ ಮಾಡಿದ್ದ ಟೇಲರ್, ಇವತ್ತು 40ರ ಹರೆಯದಲ್ಲೂ ಅದೇ ಹುಮ್ಮಸ್ಸಿನಿಂದ ಮೈದಾನದಲ್ಲಿದ್ದಾರೆ.

2025ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ ಇವರು, ಜಿಂಬಾಬ್ವೆ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು (11) ಶತಕ ಬಾರಿಸಿದ ದಾಖಲೆಯನ್ನೂ ಹೊಂದಿದ್ದಾರೆ. ಕಷ್ಟದ ದಿನಗಳನ್ನೆಲ್ಲಾ ದಾಟಿ ಬಂದು, ಇಂದು ಕ್ರಿಕೆಟ್ ದೇವರಿಗಿಂತಲೂ ಹೆಚ್ಚು ಕಾಲ ಮೈದಾನದಲ್ಲಿ ನಿಂತು ದಾಖಲೆ ಬರೆದಿರುವುದು ನಿಜಕ್ಕೂ ಜಿಂಬಾಬ್ವೆ ಕ್ರಿಕೆಟ್‌ಗೆ ಅತಿ ದೊಡ್ಡ ಹೆಮ್ಮೆಯೇ ಸರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !