ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಮಶಾನವೊಂದರಲ್ಲಿ ರುಂಡ ಇಲ್ಲದ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿರುವ ಘಟನೆ ದೆಹಲಿಯ ಮುಬಾರಕ್‌ಪುರ್ ದಾಬಾದ್ ಪ್ರದೇಶದಲ್ಲಿ ನಡೆದಿದೆ.
ಕಾಂಜಾವಾಲ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಕ್ಕಳ ತಲೆಯನ್ನು ತೆಗೆದು ಹೀಗೆ ದೇಹವನ್ನು ಎಸೆದು ಹೋದವರು ಯಾರು ಎಂದು ಆತಂಕಕ್ಕೀಡಾಗಿದ್ದಾರೆ. ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಿದ್ದಾರೆ. ನಮ್ಮ ಮಕ್ಕಳ ಕಥೆಯೇನು ಎಂದು ಜನ ಗಾಬರಿಯಾಗಿದ್ದಾರೆ.
ಯಾರೋ ಬೇಕಂತಲೇ ಶವವನ್ನು ಸ್ಮಶಾನದ ಚಿಕ್ಕ ಬಾಗಿಲಿನ ಬಳಿ ಇಟ್ಟಿದ್ದಾರೆ. ಇಲ್ಲಿ ಅಪರೂಪಕ್ಕಾದರೂ ಜನರ ಓಡಾಟ ಇದೆ. ಯಾರೋ ಮೃತದೇಹವನ್ನು ಬುಟ್ಟಿಯಲ್ಲಿ ಮುಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ನವಜಾತ ಶಿಶುವಿಗೆ ಸುಮಾರು ಎರಡರಿಂದ ಮೂರು ತಿಂಗಳ ವಯಸ್ಸಾಗಿರಬಹುದು ಎಂದು ಪ್ರಾಥಮಿಕ ಸಂಶೋಧನೆಗಳು ಸೂಚಿಸುತ್ತವೆ.
ಸುತ್ತಮುತ್ತ ಸಾಕಷ್ಟು ಸಿಸಿ ಕ್ಯಾಮರಾಗಳಿದ್ದು, ಚೆಕಿಂಗ್ ನಡೆಯುತ್ತಿದೆ. ಮಾಟ ಮಂತ್ರಕ್ಕಾಗಿ ಮೃತದೇಹವನ್ನು ಬಳಕೆ ಮಾಡಿರಬಹುದು, ಅಥವಾ ಮೃತದೇಹವನ್ನು ಯಾವುದಾದರೂ ಪ್ರಾಣಿ ಎಳೆದುಕೊಂಡು ಬಂದು ಹಾಕಿರಬಹುದು ಎಂದು ಊಹಿಸಲಾಗಿದೆ. ಪೊಲೀಸರಿಂದ ಅಧಿಕೃತ ಮಾಹಿತಿ ಬಂದ ನಂತರ ನಿಜ ಕಾರಣ ಜನರ ಎದುರು ಬರಲಿದೆ.



