Tuesday, September 16, 2025

ಮಸಣದಂತಾದ ಹಿಮಾಚಲ: ಪ್ರವಾಹದಿಂದ ಈವರೆಗೂ 404 ಜನರ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆ, ಹಠಾತ್ ಪ್ರವಾಹದಿಂದ ತತ್ತರಿಸಿರುವ ಹಿಮಾಚಲ ಪ್ರದೇಶದಲ್ಲಿ ಜೂನ್ 20 ರಿಂದ ಇಲ್ಲಿಯವರೆಗೂ ಮೃತಪಟ್ಟರ ಸಂಖ್ಯೆ 404 ಕ್ಕೆ ಏರಿಕೆಯಾಗಿದೆ.

ರಸ್ತೆ ಸಂಪರ್ಕ, ವಿದ್ಯುತ್ ಹಾಗೂ ನೀರು ಪೂರೈಕೆಗೆ ತೀವ್ರ ಅಡ್ಡಿಯುಂಟಾಗಿರುವುದಾಗಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಮೂರು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಾದ NH-03, NH-305 ಮತ್ತು NH-503A ಸೇರಿದಂತೆ ರಾಜ್ಯಾದ್ಯಂತ 598 ರಸ್ತೆಗಳು ಬಂದ್ ಆಗಿರುವುದಾಗಿ ಇಂದು ಬೆಳಗಿನ ವರದಿಯಲ್ಲಿ SDMA ಮಾಹಿತಿ ನೀಡಿದೆ. ಇದಲ್ಲದೆ, 500 ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಮತ್ತು 184 ಕುಡಿಯುವ ನೀರು ಸರಬರಾಜು ಯೋಜನೆಗಳು ಭೂಕುಸಿತ, ಹಠಾತ್ ಪ್ರವಾಹ ಮತ್ತು ನಿರಂತರ ಮಳೆಯಿಂದಾಗಿ ಸ್ಥಗಿತಗೊಂಡಿವೆ.

ಭೂಕುಸಿತ, ಹಠಾತ್ ಪ್ರವಾಹ, ಮುಳುಗಡೆ, ಮನೆ ಕುಸಿತದಂತಹ ಮಳೆ ಸಂಬಂಧಿತ ಘಟನೆಗಳಲ್ಲಿ ಒಟ್ಟಾರೇ 229 ಮಂದಿ ಸಾವನ್ನಪ್ಪಿದ್ದರೆ, ರಸ್ತೆ ಅಪಘಾತಗಳಲ್ಲಿ 175 ಮಂದಿ ಸಾವನ್ನಪ್ಪಿರುವುದಾಗಿ ಪ್ರಾಧಿಕಾರ ತಿಳಿಸಿದೆ.

ಮಂಡಿ ಜಿಲ್ಲೆಯಲ್ಲಿ 201 ರಸ್ತೆಗಳು ಹದೆಗೆಟ್ಟಿದ್ದು, 314 ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ. ಕುಲು ಜಿಲ್ಲೆಯು ಮನಾಲಿ-ಅಟಲ್ ಸುರಂಗ ರೋಹ್ತಾಂಗ್ ರಸ್ತೆ ಮತ್ತು ಅನ್ನಿ-ಜಲೋರಿ ಹೆದ್ದಾರಿ ಸೇರಿದಂತೆ 172 ರಸ್ತೆಗಳನ್ನು ಬಂದ್ ಮಾಡಲಾಗಿದೆ. ಅಲ್ಲಿ ಭಾರಿ ವಾಹನಗಳನ್ನು ನಿರ್ಬಂಧಿಸಲಾಗಿದೆ. ಶಿಮ್ಲಾದಲ್ಲಿ 57 ರಸ್ತೆಗಳು ಬಂದ್ ಆಗಿದ್ದು, 49 ಕುಡಿಯುವ ನೀರು ಯೋಜನೆಗಳು ಸ್ಥಗಿತಗೊಂಡಿವೆ. ಉನಾ ಜಿಲ್ಲೆಯಲ್ಲಿ ಭಡ್ಸಾಲಿ ಸೇತುವೆಯ ತಡೆಗೋಡೆಗಳಿಗೆ ಹಾನಿಯಾದ ಕಾರಣ NH-503A ಬಂದ್ ಆಗಿದೆ. ಇದು ಅಂತರ-ಜಿಲ್ಲಾ ಸಂಪರ್ಕದ ಮೇಲೆ ತೀವ್ರ ಪರಿಣಾಮ ಬೀರಿದೆ.

ಇದನ್ನೂ ಓದಿ