ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಯುವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಅವರು, ಕೇವಲ 30 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಟೆಸ್ಟ್ ಆಡುವ ರಾಷ್ಟ್ರಗಳ ಪೈಕಿ ಜಗತ್ತಿನ ಅತ್ಯಂತ ವೇಗದ ಟಿ20ಐ ಶತಕದ ವಿಶ್ವದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರು 2017ರಲ್ಲಿ ಶ್ರೀಲಂಕಾ ವಿರುದ್ಧ 35 ಎಸೆತಗಳಲ್ಲಿ ಸಿಡಿಸಿದ್ದ ಭಾರತದ ಅತಿ ವೇಗದ ಶತಕದ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ.
ಮೈದಾನದಲ್ಲಿ ಸಿಕ್ಸರ್‌ಗಳ ಸುನಾಮಿ
ಆರಂಭದಿಂದಲೇ ಅಫ್ಘಾನ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಅಭಿಷೇಕ್ ಶರ್ಮಾ ಅವರ ಬ್ಯಾಟಿಂಗ್‌ನಲ್ಲಿ ಭರ್ಜರಿ 9 ಬೌಂಡರಿ ಹಾಗೂ 11 ಸಿಕ್ಸರ್‌ಗಳು ಬೀಸಿದ್ದಾರೆ. ಕೇವಲ 22 ಎಸೆತಗಳಲ್ಲಿ 76 ರನ್ ಗಳಿಸುವ ಮೂಲಕ ಪವರ್‌ಪ್ಲೇನಲ್ಲಿ ಅತ್ಯಧಿಕ ರನ್ ಗಳಿಸಿದ ಹೊಸ ದಾಖಲೆಯನ್ನೂ ಅವರು ಬರೆದರು. ಒಟ್ಟಾರೆಯಾಗಿ ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ಅತ್ಯಂತ ವೇಗದ ಶತಕವಾಗಿದೆ.
ದಾಖಲೆಗಳ ಸುರಿಮಳೆ
ಟಿ20ಐ ಇತಿಹಾಸದಲ್ಲೇ 40 ಎಸೆತಗಳಿಗಿಂತ ಕಡಿಮೆ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚು ಶತಕ ಸಿಡಿಸಿದ ವಿಶ್ವದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಅಭಿಷೇಕ್ ಪಾತ್ರರಾಗಿದ್ದಾರೆ. ಇದು ಅವರ ಮೂರನೇ ಟಿ20ಐ ಶತಕವಾಗಿದ್ದು, ಇದಕ್ಕೂ ಮುನ್ನ 2025 ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ 37 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಭಾರತದ ಪರ ಟಿ20ಐನಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಶತಕ ಬಾರಿಸಿದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಅವರ ಪಟ್ಟಿಗೆ ಈಗ ಅಭಿಷೇಕ್ ಶರ್ಮಾ ಸೇರ್ಪಡೆಯಾಗಿದ್ದಾರೆ.
ತಂಡದಲ್ಲಾದ ಬದಲಾವಣೆ:
ಈ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಒಂದು ಪ್ರಮುಖ ಬದಲಾವಣೆ ಮಾಡಲಾಗಿದ್ದು, ಅರ್ಶ್‌ದೀಪ್ ಸಿಂಗ್ ಅವರ ಬದಲಿಗೆ ಯಶ್ ಠಾಕೂರ್ ಅವರಿಗೆ ಆಡುವ ಅವಕಾಶ ನೀಡಲಾಗಿತ್ತು.
ಭಾರತದ ಪ್ಲೇಯಿಂಗ್ ಇಲೆವೆನ್
ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಯಶ್ ಠಾಕೂರ್, ಜಸ್ಪ್ರಿತ್ ಬುಮ್ರಾ.
ಅಫ್ಘಾನಿಸ್ತಾನದ ಪ್ಲೇಯಿಂಗ್ ಇಲೆವೆನ್
ಇಬ್ರಾಹಿಂ ಜದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಸಿದ್ದೀಕುಲ್ಲಾ ಅಟಲ್, ಅಬ್ದುಲ್ಲಾ ಅಹ್ಮದ್‌ಜಾಯ್, ದರ್ವಿಶ್ ರಸೂಲಿ, ನೂರ್ ಉಲ್ ರಹಮಾನ್, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ.



