ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಣೇಶ ಚತುರ್ಥಿಯ ಸಾಲು ಸಾಲು ರಜೆಗಳ ಸಂದರ್ಭದಲ್ಲಿ ಊರಿಗೆ ಹೋಗುವ ಸಾರ್ವಜನಿಕರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು, ಮನಬಂದಂತೆ ಹಣ ವಸೂಲಿ ಮಾಡುತ್ತಿದ್ದ ಖಾಸಗಿ ಬಸ್ ಆಪರೇಟರ್ಗಳಿಗೆ ಸಾರಿಗೆ ಇಲಾಖೆ ಬಿಗ್ ಶಾಕ್ ನೀಡಿದೆ. ಹಬ್ಬದ ನೆಪದಲ್ಲಿ ಟ್ರಾವೆಲ್ಸ್ನವರು ಹಗಲು ದರೋಡೆ ಮಾಡುತ್ತಿದ್ದಾರೆ ಎಂಬ ಸಾರ್ವಜನಿಕರ ತೀವ್ರ ಆಕ್ರೋಶದ ಬೆನ್ನಲ್ಲೇ ಕಣಕ್ಕಿಳಿದ ಆರ್ಟಿಒ ಅಧಿಕಾರಿಗಳು, ಕಳೆದ 5 ದಿನಗಳಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಹುಬ್ಬಳ್ಳಿಗೆ 7,000 ರೂ.ಚಾರ್ಜ್
ಹಬ್ಬದ ಸಮಯದಲ್ಲಿ ಖಾಸಗಿ ಬಸ್ಗಳ ದರ ಗಗನಕ್ಕೇರಿತ್ತು. ಅದರಲ್ಲೂ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸಲು ಕೆಲ ಖಾಸಗಿ ಬಸ್ಗಳು ಒಬ್ಬ ಪ್ರಯಾಣಿಕನಿಂದ ಬರೋಬ್ಬರಿ 7,000 ರೂ. ವಸೂಲಿ ಮಾಡಿರುವ ದೂರುಗಳು ಇಲಾಖೆಗೆ ಬಂದಿದ್ದವು. ಇದರೊಂದಿಗೆ ಪ್ರಯಾಣಿಕರ ಲಗೇಜ್ಗಳನ್ನು ಸಾಗಿಸುವ ನೆಪದಲ್ಲೂ ಬಸ್ ನಿರ್ವಾಹಕರು ನಿಯಮಗಳನ್ನು ಗಾಳಿಗೆ ತೂರಿರುವುದು ತಪಾಸಣೆ ವೇಳೆ ಬೆಳಕಿಗೆ ಬಂದಿದೆ.
5ದಿನ ಹಗಲು-ರಾತ್ರಿ ಕಾರ್ಯಾಚರಣೆ
ಸೆಪ್ಟೆಂಬರ್ 11 ರಿಂದ 15 ರವರೆಗೆ ರಾಜ್ಯಾದ್ಯಂತ ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಅಂತಾರಾಜ್ಯ ಬಸ್ಗಳು ಸೇರಿದಂತೆ ಒಟ್ಟು 14,987 ಖಾಸಗಿ ಬಸ್ಗಳನ್ನು ಅಡ್ಡಗಟ್ಟಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಪರವಾನಗಿ ನಿಯಮ ಉಲ್ಲಂಘನೆ, ಅಕ್ರಮವಾಗಿ ಹೆಚ್ಚುವರಿ ಶುಲ್ಕ ವಸೂಲಿ ಹಾಗೂ ತೆರಿಗೆ ವಂಚನೆ ಮಾಡುತ್ತಿದ್ದ ಬಸ್ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಈ ವೇಳೆ ಒಟ್ಟು3,756ಪ್ರಕರಣಗಳು ದಾಖಲಾಗಿದ್ದು, 33 ಖಾಸಗಿ ಬಸ್ಗಳನ್ನು ಜಪ್ತಿ ಮಾಡಲಾಗಿದೆ ಹಾಗೂ ಅಧಿಕಾರಿಗಳು 73.6 ಲಕ್ಷ ರೂ. ವಸೂಲಿ ಮಾಡಿದ್ದು,ಇದರಲ್ಲಿ ಬರೋಬ್ಬರಿ 40.3 ಲಕ್ಷ ಕೇವಲ ದಂಡದ ರೂಪದಲ್ಲೇ ವಸೂಲಿ ಮಾಡಲಾಗಿದೆ.
ಸಾರ್ವಜನಿಕರು ನೀಡಿದ ಅಧಿಕೃತ ದೂರುಗಳ ಆಧಾರದ ಮೇಲೆಯೇ ಈ ದಾಳಿಗಳನ್ನು ನಡೆಸಲಾಗಿದ್ದು, ತಪ್ಪು ಮಾಡಿದ ಟ್ರಾವೆಲ್ಸ್ ವಿರುದ್ಧ ಕಠಿಣ ಕ್ರಮ ಜರುಗಿಸಲು ಸಂಬಂಧಪಟ್ಟ ಪ್ರಾದೇಶಿಕ ನೋಂದಣಿ ಪ್ರಾಧಿಕಾರಗಳಿಗೆ ವರದಿ ಕಳುಹಿಸಿಕೊಡಲಾಗಿದೆ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರು ತಿಳಿಸಿದ್ದಾರೆ.
ಸಚಿವರ ಗಮನಹರಿಸುವಿಕೆಗೆ ಒತ್ತಾಯ
ಹಬ್ಬ ಹರಿದಿನಗಳು ಬಂತೆಂದರೆ ಸಾಕು, ವಾರಾಂತ್ಯದ ರಜೆಗಳಲ್ಲಿ ಖಾಸಗಿ ಬಸ್ಗಳು ಹೀಗೆ ಸುಲಿಗೆ ಮಾಡುವುದು ತೀರಾ ಸಾಮಾನ್ಯ ಎಂಬಂತಾಗಿದೆ. ಪ್ರತಿ ಬಾರಿಯೂ ಅಧಿಕಾರಿಗಳು ದಾಳಿ ನಡೆಸಿ ದಂಡ ಹಾಕಿದರೂ ಇವರ ದರೋಡೆ ಬುದ್ಧಿ ಮಾತ್ರ ಬದಲಾಗುತ್ತಿಲ್ಲ. ಕೆಲವೆಡೆ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿದ್ದು, ಸಾರಿಗೆ ಸಚಿವರು ಈ ಖಾಸಗಿ ಬಸ್ಗಳ ಮಾಫಿಯಾಕ್ಕೆ ಶಾಶ್ವತವಾಗಿ ಬ್ರೇಕ್ ಹಾಕಲು ಕಠಿಣ ಕಾನೂನು ತರಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



