ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಶುಕ್ರವಾರ ಕಸ್ತೂರಿರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ವಲಯದ ನಿಯಮಗಳ ಕುರಿತು ಮಹತ್ವದ ಚರ್ಚೆ ನಡೆಯಿತು.
ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೆಬ್ರಿಗೆ ತೆರಳಿ, ವರದಿಯಿಂದಾಗಿ ಎದುರಾಗಬಹುದಾದ ಸಮಸ್ಯೆಗಳ ಕುರಿತು ಸ್ಥಳೀಯರು, ಕೃಷಿಕರು ಹಾಗೂ ಜನಪ್ರತಿನಿಧಿಗಳಿಂದ ನೇರವಾಗಿ ಮಾಹಿತಿ ಪಡೆದುಕೊಂಡರು.
ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾರ್ವಜನಿಕ ಸಂವಾದದಲ್ಲಿ ಜನರು ತಮ್ಮ ಆತಂಕ, ಬೇಡಿಕೆ ಮತ್ತು ಸಲಹೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಜನರ ಅಭಿಪ್ರಾಯವೇ ನನ್ನ ಅಭಿಪ್ರಾಯ
ಕಸ್ತೂರಿರಂಗನ್ ವರದಿಯ ವ್ಯಾಪ್ತಿ ಹಾಗೂ ಅದರ ಅನುಷ್ಠಾನದಿಂದ ಜನಜೀವನದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಿತು. ಈ ವಿಚಾರದಲ್ಲಿ ಸ್ಥಳೀಯರ ಅಭಿಪ್ರಾಯಕ್ಕೆ ಆದ್ಯತೆ ನೀಡೋದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು. ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚೆ ನಡೆಸಿದ್ದು, ಅಂತಿಮ ನಿಲುವು ರೂಪಿಸುವ ಮೊದಲು ಜನರ ವಾಸ್ತವ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು. ‘ಜನರ ಅಭಿಪ್ರಾಯವೇ ನನ್ನ ಅಭಿಪ್ರಾಯ’ ಎಂದು ಸಿಎಂ ಡಿಕೆಶಿ ಹೇಳಿದರು.
ಗ್ರಾಮವಾರು ಪರಿಶೀಲನೆ ನಡೆಸಿ
ಕಸ್ತೂರಿರಂಗನ್ ವರದಿಯ ವ್ಯಾಪ್ತಿಯನ್ನು ಸ್ಪಷ್ಟವಾಗಿ ಗುರುತಿಸಲು ಭೌತಿಕ ಸಮೀಕ್ಷೆ ನಡೆಸಬೇಕು ಎಂಬ ಬೇಡಿಕೆಯೂ ಸಭೆಯಲ್ಲಿ ಕೇಳಿಬಂತು. ಉಪಗ್ರಹ ಚಿತ್ರಗಳ ಆಧಾರದ ಮೇಲೆ ಗುರುತಿಸಲಾದ ಪ್ರದೇಶಗಳಲ್ಲಿ ಕೃಷಿಭೂಮಿ, ತೋಟಗಳು ಹಾಗೂ ಜನವಸತಿ ಪ್ರದೇಶಗಳು ಸೇರಿಕೊಳ್ಳುವ ಸಾಧ್ಯತೆಯ ಬಗ್ಗೆ ಸ್ಥಳೀಯರು ಕಳವಳ ವ್ಯಕ್ತಪಡಿಸಿದರು. ಗ್ರಾಮವಾರು ಪರಿಶೀಲನೆ ನಡೆಸಿ ವಾಸ್ತವ ಪರಿಸ್ಥಿತಿಯನ್ನು ದಾಖಲಿಸಬೇಕು ಹಾಗೂ ತಜ್ಞರ ಸಮಿತಿ ರಚಿಸಬೇಕು ಎಂಬ ಸಲಹೆಗಳೂ ಕೇಳಿಬಂದವು.
ಕೇರಳದ ಮಾದರಿಯಲ್ಲಿ ಭೌತಿಕ ಸಮೀಕ್ಷೆ ನಡೆಸಿ
ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಜನವಸತಿ ಪ್ರದೇಶಗಳನ್ನು ವರದಿಯ ವ್ಯಾಪ್ತಿಯಿಂದ ಹೊರಗಿಡುವಂತೆ ಆಗ್ರಹಿಸಿದರು. ಹಲವು ವರ್ಷಗಳಿಂದ ಅರಣ್ಯ ಸಂಬಂಧಿತ ನಿಯಮಗಳಿಂದ ಈ ಭಾಗದ ಜನರು ಸಮಸ್ಯೆ ಎದುರಿಸುತ್ತಿದ್ದು, ಇದೀಗ ಕಸ್ತೂರಿರಂಗನ್ ವರದಿಯ ವಿಚಾರ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದರು. ಕೇರಳದ ಮಾದರಿಯಲ್ಲಿ ಭೌತಿಕ ಸಮೀಕ್ಷೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೂಡ ಈ ವಿಚಾರದಲ್ಲಿ ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡುವ ಅಗತ್ಯವಿದೆ ಎಂದರು. ಕೇರಳದಲ್ಲಿ ತಜ್ಞರ ಸಮಿತಿ ಮೂಲಕ ನಡೆಸಿದ ಸಮೀಕ್ಷೆಯ ಮಾದರಿಯನ್ನು ಕರ್ನಾಟಕದಲ್ಲೂ ಪರಿಗಣಿಸಬೇಕು ಎಂದು ಸಲಹೆ ನೀಡಿದರು. ಕಾಡು ಮತ್ತು ಜನವಸತಿ ಪ್ರದೇಶಗಳ ನಡುವಿನ ಗಡಿಯನ್ನು ವಾಸ್ತವ ಪರಿಸ್ಥಿತಿಯ ಆಧಾರದಲ್ಲಿ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಈ ನಡುವೆ, ಕಸ್ತೂರಿರಂಗನ್ ವರದಿ ಕುರಿತು ಸೆಪ್ಟೆಂಬರ್ 21ರಿಂದ ನಡೆಯಲಿರುವ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲೂ ಚರ್ಚೆ ನಡೆಯಲಿದೆ. ಹೆಬ್ರಿಯ ಸಾರ್ವಜನಿಕ ಸಂವಾದದಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಮುಂದಿನ ಚರ್ಚೆ ಮತ್ತು ಸರ್ಕಾರದ ನಿರ್ಧಾರ ಪ್ರಕ್ರಿಯೆಯಲ್ಲಿ ಮಹತ್ವ ಪಡೆಯುವ ಸಾಧ್ಯತೆಯಿದೆ.



