September 18, 2026
Friday, September 18, 2026
spot_img

ಟಿ. ನರಸೀಪುರದಲ್ಲಿ ಭರ್ಜರಿ ಶೋಭಾಯಾತ್ರೆ: ಲಿಂಕ್ ರಸ್ತೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಣೇಶೋತ್ಸವದ ಮೆರವಣಿಗೆಗೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಸುದ್ದಿಯಲ್ಲಿರುವ ಟಿ. ನರಸೀಪುರದಲ್ಲಿ ಶುಕ್ರವಾರ ಹಿಂದೂ ಸಂಘಟನೆಗಳ ವತಿಯಿಂದ ಬೃಹತ್ ಶೋಭಾಯಾತ್ರೆ ನಡೆಯಿತು.

ಇನ್ಸ್‌ಪೆಕ್ಟರ್ ಧನಂಜಯ್ ಅವರ ಹೇಳಿಕೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಮಹಾಸಭಾ ಕಾರ್ಯಕರ್ತರು ಆಯೋಜಿಸಿದ್ದ ಯಾತ್ರೆ ಲಿಂಕ್ ರಸ್ತೆಯ ಮೂಲಕ ಸಾಗಿದ್ದು, ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿತ್ತು.

ಶೋಭಾಯಾತ್ರೆಯಲ್ಲಿ ತಮಟೆ, ಡೊಳ್ಳು, ವೀರಗಾಸೆ ಸೇರಿದಂತೆ ವಿವಿಧ ಜನಪದ ಕಲಾ ತಂಡಗಳು ಭಾಗವಹಿಸಿದ್ದವು. ಕಾರ್ಯಕರ್ತರು ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು. ಮಸೀದಿ ಮುಂಭಾಗದ ರಸ್ತೆಯಲ್ಲೂ ಯಾತ್ರೆ ಸಾಗಿದ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದರು. ಪರಿಸ್ಥಿತಿ ನಿಯಂತ್ರಣದಲ್ಲಿಡಲು ಕೆಎಸ್‌ಆರ್‌ಪಿ ಹಾಗೂ ಇತರ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು.

ಇನ್ಸ್‌ಪೆಕ್ಟರ್ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ

ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ, ಇನ್ಸ್‌ಪೆಕ್ಟರ್ ಧನಂಜಯ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಪೊಲೀಸರ ಬಗ್ಗೆ ಗೌರವವಿದೆ, ಆದರೆ ಅಧಿಕಾರಿಯ ಹೇಳಿಕೆಯ ಬಗ್ಗೆ ಆಕ್ಷೇಪವಿದೆ ಎಂದು ಅವರು ತಮ್ಮ ನಿಲುವು ವ್ಯಕ್ತಪಡಿಸಿದರು.

ಇದನ್ನೂ ಓದಿ:

ಗಣೇಶೋತ್ಸವದ ಸಂದರ್ಭದಲ್ಲಿ ನಡೆದ ಶಾಂತಿ ಸಭೆಯಲ್ಲಿ ಇನ್ಸ್‌ಪೆಕ್ಟರ್ ಧನಂಜಯ್ ಅವರು ಮೆರವಣಿಗೆ ಮತ್ತು ಪಟಾಕಿ ಸಿಡಿಸುವ ವಿಚಾರವಾಗಿ ನೀಡಿದ್ದರೆನ್ನಲಾದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದ ಬಳಿಕ ವಿವಾದ ತೀವ್ರಗೊಂಡಿತ್ತು. ಈ ಹೇಳಿಕೆಗೆ ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಶೋಭಾಯಾತ್ರೆ ನಡೆಸಲು ಹಿಂದೂ ಸಂಘಟನೆಗಳು ಕರೆ ನೀಡಿದ್ದವು.

ಪೊಲೀಸರಿಂದ ಕಟ್ಟುನಿಟ್ಟಿನ ಭದ್ರತಾ ಕ್ರಮ

ಇತ್ತ ಮಸೀದಿ ಸುತ್ತಮುತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟುನಿಟ್ಟಿನ ಭದ್ರತಾ ಕ್ರಮ ಕೈಗೊಂಡಿದ್ದರು. ಮೀಸಲು ಪೊಲೀಸ್ ವಾಹನಗಳು ಹಾಗೂ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !