September 19, 2026
Saturday, September 19, 2026
spot_img

ತೀರ್ಥಹಳ್ಳಿಯಲ್ಲಿ ಕಸ್ತೂರಿರಂಗನ್ ವರದಿ ಸಂವಾದ: ಕಡಲ ಮಕ್ಕಳ ಬೆನ್ನಲ್ಲೇ ಮಲೆನಾಡಿಗರ ಅಳಲು ಆಲಿಸಿದ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಂಗಳೂರಿನ ಐತಿಹಾಸಿಕ ಸಂಪುಟ ಸಭೆ ಮತ್ತು ಬಂದರು ಭೇಟಿಯ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ನೇರವಾಗಿ ಮಲೆನಾಡಿನ ಹೃದಯಭಾಗವಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಧಾವಿಸಿದ್ದಾರೆ.

ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯದ ಸಂರಕ್ಷಣೆಗಾಗಿ ಸಿದ್ಧಪಡಿಸಲಾಗಿರುವ ‘ಕಸ್ತೂರಿರಂಗನ್ ವರದಿ’ಯ ಬಗ್ಗೆ ಮಲೆನಾಡಿಗರಲ್ಲಿರುವ ಆತಂಕವನ್ನು ದೂರ ಮಾಡಲು, ಜೂನಿಯರ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರು, ರೈತರು, ಪರಿಸರ ತಜ್ಞರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಿಎಂ ಮುಖಾಮುಖಿ ಸಂವಾದ ನಡೆಸಿದರು.

ಕಸ್ತೂರಿರಂಗನ್ ವರದಿಯಲ್ಲಿ ಗುರುತಿಸಲಾದ ಕರ್ನಾಟಕದ ಒಟ್ಟು 1,449 ಹಳ್ಳಿಗಳ ಪೈಕಿ ಬರೋಬ್ಬರಿ 447 ಗ್ರಾಮಗಳು ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಇರುವುದರಿಂದ ಈ ಭಾಗದ ಜನರ ಭವಿಷ್ಯದ ದೃಷ್ಟಿಯಿಂದ ಈ ಸಭೆ ಅತ್ಯಂತ ನಿರ್ಣಾಯಕವಾಗಿತ್ತು.

ವೇದಿಕೆಯಲ್ಲಿ ‘ವಂದೇ ಮಾತರಂ’ ಗದ್ದಲ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಈ ವೇಳೆ ವೇದಿಕೆಯಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಬೇಲೂರು ಗೋಪಾಲಕೃಷ್ಣ ಹಾಗೂ ನೂರಾರು ಮಲೆನಾಡು ಭಾಗದ ನಿವಾಸಿಗಳು ಉಪಸ್ಥಿತರಿದ್ದರು.

ಆದರೆ, ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ವೇದಿಕೆಯ ಮೇಲೆ ಹಠಾತ್ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಸಂಪ್ರದಾಯದಂತೆ ಮೊದಲು ನಾಡಗೀತೆ ಹಾಡಲಾಯಿತು, ನಂತರ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಗಾಯನ ನಡೆಯಿತು. ಹಾಡು ಮುಗಿಯುತ್ತಿದ್ದಂತೆ ಮೈಕ್ ಕೈಗೆತ್ತಿಕೊಂಡ ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ, “ವಂದೇ ಮಾತರಂ ಗೀತೆಯ ಕೇವಲ ಎರಡು ಚರಣಗಳನ್ನು ಮಾತ್ರ ಏಕೆ ಹಾಡಲಾಯಿತು? ಇಡೀ ಗೀತೆಯನ್ನು ಪೂರ್ಣವಾಗಿ ಹಾಡಬೇಕಿತ್ತಲ್ಲವೇ?” ಎಂದು ಸಿಎಂ ಅವರನ್ನು ನೇರವಾಗಿ ಪ್ರಶ್ನಿಸಿದರು.

ಇದನ್ನೂ ಓದಿ:

ಬಿಜೆಪಿ – ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ

ಶಾಸಕರ ಈ ಆಕ್ಷೇಪ ವೇದಿಕೆಯಲ್ಲಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು. ಬಿಜೆಪಿ ನಾಯಕರ ಪ್ರಶ್ನೆಗೆ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ತಕ್ಷಣವೇ ‘ಡಿಕೆ, ಡಿಕೆ’ ಎಂದು ಘೋಷಣೆ ಕೂಗಲಾರಂಭಿಸಿದರು. ಮತ್ತೊಂದೆಡೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಸಿ. ಯೋಗೇಶ್ ಅವರು ಮೈಕ್ ಪಡೆದು ‘ಡಿ.ಕೆ. ಶಿವಕುಮಾರ್ ಕಿ ಜೈ’ ಎಂದು ಜಯಘೋಷ ಹಾಕಿದರು. ಈ ರಾಜಕೀಯ ಜಟಾಪಟಿಯಿಂದಾಗಿ ಸಮಾವೇಶದ ಸ್ಥಳದಲ್ಲಿ ಕೆಲಕಾಲ ಗೊಂದಲ ಮತ್ತು ಹೈಡ್ರಾಮಾ ಸೃಷ್ಟಿಯಾಯಿತು. ನಂತರ ಹಿರಿಯ ನಾಯಕರು ಪರಿಸ್ಥಿತಿಯನ್ನು ತಿಳಿಗೊಳಿಸಿದ ಬಳಿಕ ಸಂವಾದ ಕಾರ್ಯಕ್ರಮ ಸುಗಮವಾಗಿ ಮುಂದುವರಿಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !