September 20, 2026
Sunday, September 20, 2026
spot_img

ಮನೆ-ಆಸ್ತಿ ನೋಡಿ ಮದುವೆ ಮಾಡೋ ಕಾಲ ಹೋಯ್ತು, ಈಗ ಊರಿನ ರಸ್ತೆ ನೋಡಿ ಮದುವೆ ಬೇಡ ಅಂತಿದ್ದಾರೆ!

ಹೊಸದಿಗಂತ ವರದಿ ಹಾಸನ:

ಗ್ರಾಮದ ಹದಗೆಟ್ಟ ರಸ್ತೆಗಳು ಹಾಗೂ ಊಳು ತುಂಬಿಕೊಂಡಿರುವ ಕೆರೆಯ ದುಸ್ಥಿತಿ ಕಂಡು ಮದುವೆ ಮಾತುಕತೆಗೆ ಬಂದಿದ್ದ ಹೆಣ್ಣಿನ ಕಡೆಯವರು ಅಸಮಾಧಾನ ವ್ಯಕ್ತಪಡಿಸಿ, ಇಂತಹ ಪರಿಸ್ಥಿತಿ ಇರುವ ಊರಿಗೆ ತಮ್ಮ ಮಗಳನ್ನು ಮದುವೆ ಮಾಡಿಕೊಡುವುದಿಲ್ಲ ಎಂದು ಹೇಳಿದ ಘಟನೆ ಬೇಲೂರು ತಾಲ್ಲೂಕಿನ ಅರೇಹಳ್ಳಿ ಗ್ರಾಮದ ಬೆಳ್ಳಾವರದಲ್ಲಿ ನಡೆದಿದೆ.

ಮದುವೆ ಸಂಬಂಧದ ಮಾತುಕತೆಗಾಗಿ ಬೆಳ್ಳಾವರ ಗ್ರಾಮಕ್ಕೆ ಬಂದಿದ್ದ ಹೆಣ್ಣಿನ ಕಡೆಯವರಿಗೆ ಗ್ರಾಮದ ರಸ್ತೆ ಸೇರಿದಂತೆ ಮೂಲಸೌಕರ್ಯಗಳ ದುಸ್ಥಿತಿ ಗಮನಕ್ಕೆ ಬಂದಿದೆ. ಗ್ರಾಮದೊಳಗೆ ಸಂಚರಿಸುವ ಸಂದರ್ಭದಲ್ಲಿ ಹದಗೆಟ್ಟ ರಸ್ತೆ ಕಂಡುಬಂದಿದ್ದು, ಅಲ್ಲದೆ ಗ್ರಾಮದ ಕೆರೆಯಲ್ಲಿ ಅಪಾರ ಪ್ರಮಾಣದ ಊಳು ತುಂಬಿಕೊಂಡಿರುವುದನ್ನು ಕಂಡು ಹೆಣ್ಣಿನ ಮನೆಯವರು ಸಂಬಂಧ ಬೆಳೆಸಲು ಹಿಂದೇಟು ಹಾಕಿದ್ದಾರೆ.

ಗ್ರಾಮದ ರಸ್ತೆಗಳು ಹಲವು ವರ್ಷಗಳಿಂದ ಸಮರ್ಪಕವಾಗಿ ದುರಸ್ತಿಯಾಗದೆ ಇರುವುದರಿಂದ ಮಳೆಗಾಲದಲ್ಲಿ ಸಂಚಾರ ಮತ್ತಷ್ಟು ದುಸ್ತರವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೆರೆಯಲ್ಲಿಯೂ ಊಳು ತುಂಬಿಕೊಂಡಿದ್ದು, ಸೂಕ್ತ ಸ್ವಚ್ಛತೆ ಹಾಗೂ ನಿರ್ವಹಣೆ ಇಲ್ಲದ ಕಾರಣ ಕೆರೆಯ ಸ್ಥಿತಿ ಹದಗೆಡುತ್ತಿದೆ ಎಂಬುದು ಸ್ಥಳೀಯರ ಅಳಲಾಗಿದೆ. ಇದೇ ಪರಿಸ್ಥಿತಿಯನ್ನು ಕಂಡು ಹೆಣ್ಣಿನ ಕಡೆಯವರು, ರಸ್ತೆಯೇ ಈ ರೀತಿಯಾಗಿದ್ದು, ಊರಿನ ಕೆರೆಯೂ ಊಳು ತುಂಬಿಕೊಂಡಿದೆ. ಇಂತಹ ಊರಿಗೆ ನಮ್ಮ ಮಗಳನ್ನು ಹೇಗೆ ಕೊಡುವುದು? ಎಂದು ಪ್ರಶ್ನಿಸಿ ಮದುವೆ ಸಂಬಂಧಕ್ಕೆ ಹಿಂದೇಟು ಹಾಕಿ ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಮದುವೆ ಸಂಬಂಧಗಳಲ್ಲಿ ಮನೆ, ಕುಟುಂಬ ಹಾಗೂ ಉದ್ಯೋಗ ಸೇರಿದಂತೆ ಹಲವು ವಿಚಾರಗಳನ್ನು ಗಮನಿಸುವುದು ಸಹಜ. ಆದರೆ ಬೆಳ್ಳಾವರದಲ್ಲಿ ಗ್ರಾಮದ ಮೂಲಸೌಕರ್ಯಗಳ ದುಸ್ಥಿತಿಯೇ ಮದುವೆ ಸಂಬಂಧಕ್ಕೆ ಅಡ್ಡಿಯಾಗಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.

ಈ ಘಟನೆ ಗ್ರಾಮದ ರಸ್ತೆ ಮತ್ತು ಕೆರೆಯ ಸಮಸ್ಯೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ರಸ್ತೆ ದುರಸ್ತಿ, ಕೆರೆಯ ಊಳು ತೆರವು ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಮೂಲಕ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಒದಗಿಸಬೇಕು. ಇಲ್ಲವಾದರೆ ನಮ್ಮ ಊರಿಗೆ ಹೆಣ್ಣು ಕೊಡಲ್ಲ ಎನ್ನುವ ಮಾತು ಮುಂದೆಯೂ ಕೇಳಿಬರಬಹುದು ಎಂಬ ಆತಂಕ ಗ್ರಾಮಸ್ಥರದ್ದು. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ಅಗತ್ಯ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !