September 20, 2026
Sunday, September 20, 2026
spot_img

13 ಕೋಟಿ Rolls-Royce ಕಾರ್ ವಿವಾದ: ಮೈಥಿಲಿ ಠಾಕೂರ್ ಬೆನ್ನಿಗೆ ನಿಂತ ಕಂಗನಾ ರಣಾವತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನ ಪ್ರಸಿದ್ಧ ಲಾಲ್‌ಬಾಗ್‌ಚಾ ರಾಜ ಗಣಪತಿ ದರುಶನಕ್ಕೆ ನೀಲಿ ಬಣ್ಣದ, ಬರೋಬ್ಬರಿ 13 ಕೋಟಿ ರೂಪಾಯಿ ಬೆಲೆಬಾಳುವ ‘ರೋಲ್ಸ್ ರಾಯ್ಸ್’ ಐಷಾರಾಮಿ ಕಾರಿನಲ್ಲಿ ಎಂಟ್ರಿ ಕೊಟ್ಟ ಬಿಹಾರದ ಯುವ ಶಾಸಕಿ ಹಾಗೂ ಗಾಯಕಿ ಮೈಥಿಲಿ ಠಾಕೂರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದ್ದಾರೆ. ರಾಜಕೀಯಕ್ಕೆ ಬಂದ ಒಂದೇ ವರ್ಷಕ್ಕೆ ಇಷ್ಟೊಂದು ಐಷಾರಾಮಿ ಕಾರು ಎಲ್ಲಿಂದ ಬಂತು ಎಂದು ನೆಟ್ಟಿಗರು ಪ್ರಶ್ನೆ ಮೇಲೆ ಪ್ರಶ್ನೆ ಕೇಳ್ತಿದ್ರು. ಆದ್ರೆ, ಇವಾಗ ಈ ಟ್ರೋಲರ್‌ಗಳಿಗೆ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ನೀಡಿದ ತಿರುಗೇಟು ವೈರಲ್ ಆಗಿದೆ.

ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮೈಥಿಲಿ ಪರವಾಗಿ ಬ್ಯಾಟ್ ಬೀಸಿದ ಕಂಗನಾ ರಣಾವತ್, “ಜನಪ್ರತಿನಿಧಿಗಳು ಅಥವಾ ರಾಜಕಾರಣಿಗಳು ಚೆನ್ನಾಗಿ ಬದುಕೋದನ್ನು ನೋಡಿದ್ರೆ ಕೆಲವರಿಗೆ ಎಲ್ಲಿಲ್ಲದ ಉರಿ ಶುರುವಾಗುತ್ತೆ. ನಮ್ಮ ಯುವ ಶಾಸಕಿ ಐಷಾರಾಮಿ ಕಾರ್ ಬಳಸಿ ದರುಶನಕ್ಕೆ ಹೋದ್ರೆ ಅದಕ್ಕೂ ಟ್ರೋಲ್ ಮಾಡ್ತಾರೆ. ನಾವು ಸಮಾಜ ಸೇವೆಗೆ ಬಂದಿರಬಹುದು, ಆದ್ರೆ ನಮಗೂ ಒಂದು ಸ್ವಂತ ಕೆರಿಯರ್, ಜೀವನ ಮತ್ತು ಜನಪ್ರಿಯತೆ ಇರುತ್ತೆ. ನಾವು ಸಾರ್ವಜನಿಕರ ಒಳಿತಿಗಾಗಿ ಕೆಲಸ ಮಾಡ್ತೀವಿ ನಿಜ, ಆದ್ರೆ ನಾವು ಚೆನ್ನಾಗಿ ಬದುಕಿದ್ರೆ ಕೆಲವರಿಗೆ ಯಾಕೆ ಹೊಟ್ಟೆಗೆ ಕಿಚ್ಚು? ನಮಗೂ ಒಳ್ಳೆ ಲೈಫ್‌ಸ್ಟೈಲ್ ಇರಬಾರದಾ? ನಮಗೆ ಸಾರ್ವಜನಿಕರ ಹಣದ ಮೇಲೆ ಕಣ್ಣಿಲ್ಲ. ಆದ್ರೆ ನಾವು ಯಾವಾಗಲೂ ಬಡವರಾಗೇ, ಜೀವವೇ ಇಲ್ಲದ ಹಾಗೆ ಬದುಕಬೇಕು ಎಂದು ಬಯಸೋದು ಎಷ್ಟರ ಮಟ್ಟಿಗೆ ಸರಿ?” ಎಂದು ಖಡಕ್ ಆಗಿ ಕ್ಲಾಸ್ ತಗೊಂಡಿದ್ದಾರೆ.

ಮೈಥಿಲಿ ಠಾಕೂರ್ ಬರಿ ರಾಜಕಾರಣಿ ಅಷ್ಟೇ ಅಲ್ಲ. ಬಿಹಾರದ ಮಧುಬನಿ ಜಿಲ್ಲೆಯ ಬೆನಿಪಟ್ಟಿ ಮೂಲದವರಾದ ಮೈಥಿಲಿ, ಸಣ್ಣ ವಯಸ್ಸಿನಿಂದಲೇ ತಂದೆ ರಮೇಶ್ ಠಾಕೂರ್ ಹಾಗೂ ತಾತನಿಂದ ಶಾಸ್ತ್ರೀಯ ಸಂಗೀತ ಮತ್ತು ಜಾನಪದ ಗಾಯನ ಕಲಿತವರು. ಕಷ್ಟಪಟ್ಟು ಸಂಗೀತ ಲೋಕದಲ್ಲಿ ಹೆಸರು ಮಾಡಿ, ಭಾರತದಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿರುವ ಪಾಪ್ಯುಲರ್ ಸಿಂಗರ್. ಕಳೆದ 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಆರ್‌ಜೆಡಿ ನಾಯಕ ಬಿನೋದ್ ಮಿಶ್ರಾ ವಿರುದ್ಧ ಗೆದ್ದು, ಬಿಹಾರದ ಅತಿ ಕಿರಿಯ ಶಾಸಕಿಯಾಗಿ ಹೊರಹೊಮ್ಮಿದರು.

ತಮ್ಮ ಸ್ವಂತ ಶ್ರಮ, ಗಾಯನದಿಂದ ಹೆಸರು ಮತ್ತು ಹಣ ಸಂಪಾದಿಸಿರುವ ಮೈಥಿಲಿ ಅವರನ್ನು, ಬರಿ ಶಾಸಕಿ ಅನ್ನೋ ಒಂದೇ ಕಾರಣಕ್ಕೆ ಟ್ರೋಲ್ ಮಾಡ್ತಿರೋದು ಸರಿನಾ ಎಂದು ಕಂಗನಾ ಪ್ರಶ್ನಿಸಿದ್ದು, ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !