ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ಸಲ್ಲಿಸಿದ್ದು, ಇಂದು ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ.
ಪವಿತ್ರಾ ಗೌಡ ಪರ ವಕೀಲರಾದ ಬಾಲನ್ ವಾದ ಮಂಡನೆ ಮಾಡಿದ್ದು, ಪವಿತ್ರಾ ಗೌಡ ಮಹಿಳೆ ಅನ್ನೋದನ್ನು ಪರಿಗಣಿಸಬೇಕು, ಆಕೆಗೆ ಟೀನೇಜ್ನಲ್ಲಿರುವ ಮಗಳು, ಆರೈಕೆ ಬೇಕಾದ ತಾಯಿಯಿದ್ದಾರೆ. ಆಕೆ ಮಾನಸಿಕವಾಗಿ ನೊಂದಿದ್ದಾರೆ. ಈ ಹಿಂಸೆ ತಡೆಯೋಕೆ ಆಗ್ತಾ ಇಲ್ಲ ಒಂದು ತೊಟ್ಟು ವಿಷ ಕೊಡಿ ಎಂದು ಹೇಳುತ್ತಾರೆ. ಜೈಲಧಿಕಾರಿಗಳು ತಮ್ಮ ಜತೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ ಎಂದಿದ್ದಾರೆ. ಈಗಾಗಲೇ ಒಂದು ವರ್ಷದಿಂದ ಜೈಲಿನಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.
ಬಹುತೇಕ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದೆ. ಕೆಲವು ಸಾಕ್ಷಿಗಳು ಸರ್ಕಾರಿ ಸಾಕ್ಷಿಗಳಾಗಿದ್ದಾರೆ. ಹೀಗಾಗಿ ಜಾಮೀನು ನೀಡಿದರೆ ಸಾಕ್ಷಿಗಳಿಗೆ ಯಾವುದೇ ರೀತಿಯ ತೊಂದರೆ ಅಥವಾ ಸಾಕ್ಷ್ಯ ನಾಶ ಮಾಡುವ ಪರಿಸ್ಥಿತಿ ಎದುರಾಗುವುದಿಲ್ಲ ಎಂದು ವಕೀಲರು ವಾದಿಸಿದರು. ಟ್ರಯಲ್ ವಿಳಂಬವಾಗುತ್ತಿರುವ ಹಿನ್ನೆಲೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದ ಬಾಲನ್, ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ಆದೇಶದಲ್ಲಿನ ಒಂದು ವರ್ಷದ ಜಾಮೀನು ನಿರ್ಬಂಧ ಪವಿತ್ರಾಗೌಡ ಅವರಿಗೆ ಅನ್ವಯಿಸುವುದಿಲ್ಲ ಎಂದು ವಾದಿಸಿದರು.
ಪವಿತ್ರಾಗೌಡ ಅವರಿಂದ ಒಂದು ಪತ್ರ ನೀಡಲು ಅವಕಾಶ ಮಾಡಿಕೊಡಬೇಕು ಎಂದು ವಕೀಲ ನಾರಾಯಣಸ್ವಾಮಿ ನ್ಯಾಯಾಲಯಕ್ಕೆ ಮನವಿ ಮಾಡಿದರು. ಪ್ರಕರಣದ ಜಾಮೀನು ಅರ್ಜಿಯ ವಿಚಾರಣೆ ಮುಂದುವರಿದಿದ್ದು, ಪವಿತ್ರಾಗೌಡ ಪರ ಹಾಗೂ ಸರ್ಕಾರಿ ಅಭಿಯೋಜಕರ ವಾದಗಳನ್ನು ನ್ಯಾಯಾಲಯ ಆಲಿಸುತ್ತಿದೆ.



