September 27, 2026
Sunday, September 27, 2026
spot_img

ಹಾಲಿನ ದರ ಏರಿಕೆ ನಿರ್ಧಾರಕ್ಕೆ ಹೆಚ್ಡಿಕೆ ವಿರೋಧ: ಉತ್ಪಾದಕರ ಪ್ರೋತ್ಸಾಹ ಧನ ಹೆಚ್ಚಿಸಿ ಆರನೇ ಗ್ಯಾರಂಟಿ ಘೋಷಿಸಲು ಸಲಹೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:


ರಾಜ್ಯದಲ್ಲಿ ಹಾಲಿನ ದರ ಹೆಚ್ಚಿಸುವ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ದರ ಹೆಚ್ಚಿಸುವ ಬದಲು ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಹೆಚ್ಚಿಸುವಂತೆ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.


ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರೈತರಿಗೆ ನೀಡುತ್ತಿರುವ 5 ರೂ. ಪ್ರೋತ್ಸಾಹ ಧನವನ್ನು ಸರ್ಕಾರವು 15 ರೂ.ಗೆ ಹೆಚ್ಚಿಸಲಿ. ಅದನ್ನೇ ಸರ್ಕಾರದ ‘ಆರನೇ ಗ್ಯಾರಂಟಿ’ ಎಂದು ಘೋಷಿಸಲಿ, ಇದರಿಂದ ರೈತರಿಗೆ ಅನುಕೂಲವಾಗುವುದರ ಜೊತೆಗೆ ಗ್ರಾಹಕರ ಮೇಲೂ ಹೆಚ್ಚುವರಿ ಹೊರೆ ಬೀಳುವುದಿಲ್ಲ ಎಂದು ಸಲಹೆ ನೀಡಿದ್ದಾರೆ.


ಸರಕಾರದ ಈ ನಿರ್ಧಾರದಿಂದ ಜನ ಸಾಮಾನ್ಯರು, ಬಡವರು ಕುಡಿಯುವ ಹಾಲನ್ನೂ ಕೊಂಡುಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೈನುಗಾರರಿಗೆ ಬಲ ತುಂಬುವುದು ಸರಕಾರದ ಕರ್ತವ್ಯ. ಹಾಗಾಗಿ ಪ್ರಸ್ತುತ ನೀಡಲಾಗುತ್ತಿರುವ 5 ರೂಪಾಯಿ ಪ್ರೋತ್ಸಾಹ ಧನವನ್ನು ಸರ್ಕಾರ 15 ರೂಪಾಯಿಗೆ ಏರಿಸಲಿ, ಇದರಿಂದ ಗ್ರಾಹಕರ ಮೇಲೆ ಬೆಲೆ ಏರಿಕೆಯ ಹೊರೆ ಬೀಳುವುದಿಲ್ಲ. ಆದರೆ ಸರಕಾರವೇ ಈ ವೆಚ್ಚವನ್ನು ಭರಿಸಬೇಕು ಎಂದು ಅವರು ಇದೇ ಸಂಧರ್ಭ ಆಗ್ರಹಿಸಿದರು.


ಸರಕಾರದ ನಡೆಗಳನ್ನು ಟೀಕಿಸಿದ ಅವರು, ಆಡಳಿತವು ಸಾರ್ವಜನಿಕರ ಪರವಾಗಿ ಕೆಲಸ ಮಾಡಬೇಕು, ಯಾವುದೇ ಭ್ರಷ್ಟಾಚಾರ, ಅಕ್ರಮ ಎಸಗದೆ, ಕಾನೂನುಬದ್ಧವಾಗಿ ನಾಡನ್ನು ಕಟ್ಟುವ ಮತ್ತು ಉಳಿಸುವ ಕೆಲಸ ಮಾಡುವುದಾದರೆ, ಇನ್ನೂ 10 ವರ್ಷ ನೀವೇ ಅಧಿಕಾರದಲ್ಲಿರಿ. ನಾನೇ ಸ್ವತಃ ಸಾರ್ವಜನಿಕವಾಗಿ 50 ಸಾವಿರ ಜನರನ್ನು ಸೇರಿಸಿ ನಿಮಗೆ ಅದ್ದೂರಿಯಾಗಿ ಸನ್ಮಾನ ಮಾಡುತ್ತೇನೆ ಎಂದು ಅವರು ವ್ಯಂಗ್ಯವಾಡಿದರು.

Must Read