September 27, 2026
Sunday, September 27, 2026
spot_img

ಗೂಂಡಾ ಕಾಯ್ದೆ ಜಾರಿ ಖಂಡಿಸಿ ನಾಳೆ ‘ಬಿ.ಸಿ.ರೋಡು ಚಲೋ’: ಪ್ರತಿಭಟನಾ ಸಭೆಗೆ ಹಿಂಜಾವೇ ಬೆಂಬಲ

ಹೊಸದಿಗಂತ ವರದಿ ಬಂಟ್ವಾಳ:


ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕೊಳತ್ತಮಜಲು‌ ನಿವಾಸಿ ರಹಿಮಾನ್ ಕೊಲೆ ಪ್ರಕರಣದಲ್ಲಿ ಬಂಧಿರಾಗಿರುವ ಭರತ್ ಕುಮ್ಡೇಲು ಸೇರಿದಂತೆ 8 ಮಂದಿ ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಕೋಕಾ ಕಾಯ್ದೆಯಲ್ಲಿ‌ ಮೈಸೂರು ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದರೂ, ಸರಕಾರ ಪೊಲೀಸರನ್ನು ದುರುಪಯೋಗಪಡಿಸಿಕೊಂಡು ಭರತ್ ಸಹಿತ 6 ಮಂದಿಯ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿ ಜೈಲಿನಿಂದ ಹೊರಬಾರದಂತೆ ತಡೆ ಹಿಡಿದಿರುವ ಕ್ರಮವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಬಂಟ್ವಾಳ ಪ್ರಖಂಡ ಸೆ.28ರಂದು ಬೆಳಿಗ್ಗೆ ಬಿ.ಸಿ.ರೋಡ್‌ನಲ್ಲಿ ಆಯೋಜಿಸಿರುವ ಪ್ರತಿಭಟನಾ ಸಭೆಗೆ ಸರ್ವ ರೀತಿಯ ಸಿದ್ದತೆ ನಡೆಸಲಾಗಿದೆ.

ಬಿ.ಸಿ.ರೋಡ್‌ನ ರಕ್ತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವ ಸಭೆಯಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸೇರಿದಂತೆ ಹಿಂದು ಸಂಘಟನೆಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ವಿ.ಹಿಂ.ಪ ಬಂಟ್ವಾಳ ಪ್ರಖಂಡ ಅಧ್ಯಕ್ಷ, ನ್ಯಾಯವಾದಿ ಪ್ರಸಾದ್ ಕುಮಾರ್ ರೈ ತಿಳಿಸಿದ್ದಾರೆ.


ಹಿಂದು ಸಮಾಜದ ವರ್ತಕರಿಗೂ ಅಂಗಡಿ ಮುಂಗಟ್ಟನ್ನು ಸ್ವಯಂಪ್ರೇರಿತವಾಗಿ ಮುಚ್ಚಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆಯು ಮನವಿ‌ಮಾಡಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕಿನಿಂದ ಹಿಂದು ಕಾರ್ಯಕರ್ತರು, ಹಿಂದು ಸಮಾಜದ ಪ್ರತಿಯೋರ್ವರು ಭಾಗವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಸಂಘಟನೆಯ ವತಿಯಿಂದ ಕಾರ್ನರ್ ಬೈಠಕ್ ಕೂಡ ನಡೆಸಿ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.


ಪ್ರತಾಪ್ ಸಿಂಹ ಭಾಗಿ ನಿರೀಕ್ಷೆ


ಸಂಘ ಪರಿವಾರ ಸಂಘಟನೆಯ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಒತ್ತಾಸೆಯ ಹಿನ್ನಲೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆಯಾದರೂ ಇನ್ನು ಅಧಿಕೃತಗೊಂಡಿಲ್ಲ ಎನ್ನಲಾಗಿದೆ. ಕೊಲೆ ಪ್ರಕರಣದಲ್ಲಿ ಆರೆಸ್ಸೆಸ್ ಹಿರಿಯರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ನೋಟಿಸ್‌ ಜಾರಿಗೊಳಿಸುವ ಮೂಲಕ ಅವರನ್ನು ಸಿಲುಕಿಸುವ ಹುನ್ನಾರ ನಡೆಯುತ್ತಿರುವ ಸಂಶಯ ವ್ಯಕ್ತವಾಗಿರುವುದರಿಂದ ಈ ಬಗ್ಗೆಯು ಸಭೆಯಲ್ಲಿ ಸಂಘಟನೆಯ ನಿಲುವನ್ನು ವ್ಯಕ್ತಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.


ಹಿಂದೂ ಜಾಗರಣ ವೇದಿಕೆ ಬೆಂಬಲ


ಪ್ರತಿಭಟನೆಗೆ ಮಂಗಳೂರು ಗ್ರಾಮಾಂತರ ಜಿಲ್ಲೆ ಬೆಂಬಲವನ್ನು ವ್ಯಕ್ತಪಡಿಸಿದೆ. ಈ ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದ್ದು, ವ್ಯಾಪಕ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

Must Read