ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕೆಂಗೇರಿಯ ಆರ್. ಆರ್. ವೈದ್ಯಕೀಯ ಕಾಲೇಜು ಹಿಂಭಾಗದಲ್ಲಿ ನಡೆದ ಆನೆ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.
ಬೆಳಗ್ಗೆ ಐದು ಗಂಟೆಯ ಸುಮಾರಿಗೆ ವಾಕಿಂಗ್ ಹೊರಟಿದ್ದ ಅಂಚೆಪಾಳ್ಯ ನಿವಾಸಿ ನಾಗರಾಜ್ ಮೃತರು. ವಾಕಿಂಗ್ ಹೋಗಿದ್ದ ಜಾಗದಲ್ಲಿ ನಾಗರಾಜ್ ರಕ್ತಸಿಕ್ತವಾಗಿ ಬಿದ್ದಿದ್ದರು. ಅದೇ ಜಾಗದಲ್ಲಿ ಎರಡು ಕಾಂಪೌಂಡ್ಗಳು ಉರುಳಿ ಬಿದ್ದಿದ್ದವು. ಇವೆಲ್ಲರೂ ಆನೆಯ ಕೆಲಸ ಎಂದು ಸ್ಥಳೀಯರು ಸಂಶಯ ಪಟ್ಟಿದ್ದಾರೆ.
ನಾಗರಾಜು ಅವರನ್ನು ಕಂಡ ಸ್ಥಳೀಯರು ತಡಮಾಡದೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ. ಬೆಳಗ್ಗೆ ಐದು ಗಂಟೆಗೆ ಸಿಸಿಟಿವಿ ಕ್ಯಾಮರಾದಲ್ಲಿ ಆನೆ ಓಡಾಟ ಕಾಣಿಸಿದೆ. ಇನ್ನು ಅದೇ ರಸ್ತೆಯಲ್ಲಿ ಜಾಗಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕೆಲವೇ ಸೆಕೆಂಡ್ಗಳಲ್ಲಿ ಆನೆದಾಳಿಯಿಂದ ಬಚಾವಾಗಿದ್ದಾರೆ.
ಈ ಘಟನೆಯು ಕಗ್ಗಲಿಪುರ ಅರಣ್ಯ ವಲಯದ ವ್ಯಾಪ್ತಿಯಲ್ಲಿ ನಡೆದಿದೆ ಮತ್ತು ಆನೆಯು ಬನ್ನೇರುಘಟ್ಟ ಪ್ರದೇಶದಿಂದ ಬಂದಿರಬಹುದು ಎಂದು ಶಂಕಿಸಲಾಗಿದೆ . ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಆನೆಯನ್ನು ಪತ್ತೆಹಚ್ಚಿ ಸೆರೆಹಿಡಿಯಲು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ದಿನಗೂಲಿ ಕಾರ್ಮಿಕರಾಗಿದ್ದ ನಾಗರಾಜ್ ಪತ್ನಿ ಹಾಗೂ ನಾಲ್ವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಈ ಭಾಗದಲ್ಲಿ ಕಳೆದ ಕೆಲ ದಿನಗಳಿಂದಲೂ ಕಾಡು ಪ್ರಾಣಿಗಳ ಸಂಚಾರದ ಬಗ್ಗೆ ಮಾಹಿತಿ ಇದ್ದರೂ ಸಹ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಮೃತರ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.



