September 28, 2026
Monday, September 28, 2026
spot_img

ಕೆಪಿಎಸ್​​ಸಿ ಅಕ್ರಮ ಕೇಸ್​​: ಬಸವರಾಜ್‌ ಕನ್ನಾಳೆ ಡೈರಿಯಿಂದ ಸ್ಫೋಟಕ ಮಾಹಿತಿ ಬಯಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಪೋಟಕ ಮಾಹಿತಿ ಬಯಲಾಗಿದೆ. ಪ್ರಮುಖರಣದ ಪ್ರಮುಖ ಆರೋಪಿ ಬಸವರಾಜ ಕನ್ನಾಳೆ ಬರೆದಿಟ್ಟಿದ್ದ ಡೈರಿಯೊಳಗಿರುವ ರಹಸ್ಯ ಮಾಹಿತಿ ಇದೀಗ ಜಗಜ್ಜಾಹೀರಾಗಿದೆ.

ರಹಸ್ಯ ಡೈರಿಯ ಹಾಳೆಗಳು ತನಿಖಾಧಿಕಾರಿಗಳ ಕೈಗೆ ಸಿಕ್ಕಿದ್ದು, ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ಪಡೆದಿರುವ ಮಾಹಿತಿ ಸಿಕ್ಕಿದೆ. ಯಾವ ಅಭ್ಯರ್ಥಿ? ಎಷ್ಟು ಹಣ ನೀಡಿದ್ದಾರೆ ಎಂಬೆಲ್ಲಾ ಮಾಹಿತಿಯನ್ನು ಬರೆದು ಇಡಲಾಗಿದೆ. ತನಿಖಾಧಿಕಾರಿಗಳು ಆರೋಪಿ ಬಸವರಾಜ್ ಕನ್ನಾಳೆ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ ವೇಳೆ ಈ ಲೆಕ್ಕದ ಹಾಳೆ ಸಿಕ್ಕಿದೆ. ಆತ ಪರೀಕ್ಷೆ ಬರೆದ ಅಭ್ಯರ್ಥಿಗಳ ಪಟ್ಟಿ, ಪಾವತಿಯಾದ ಮೊತ್ತ, ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಜಲಸಂಪನ್ಮೂಲ ಇಲಾಖೆಯ ಉಲ್ಲೇಖದೊಂದಿಗೆ ಲೆಕ್ಕ ಇಟ್ಟುಕೊಂಡಿದ್ದ.

ಇನ್ನೂ ಬರಬೇಕಾದ ಹಣ, ಬಂದಿರುವ ಹಣ ಎಂದು ಸ್ಪಷ್ಟವಾಗಿ ಆತ ಬರೆದಿದ್ದ. ಒಟ್ಟಾರೆ ಡೀಲ್‌ನಿಂದಾಗಿ ಕೋಟ್ಯಂತರ ಹಣ ಬರುವುದು ಬಾಕಿ ಇತ್ತು. ಒಟ್ಟಾರೆ 20ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಅಕ್ರಮವಾಗಿ ತರಬೇತಿ ನೀಡಲು ಈತ ಮೂರು ವಿಲ್ಲಾಗಳನ್ನು ಬುಕ್ ಮಾಡಿದ್ದ ವಿಚಾರವೂ ತಿಳಿದುಬಂದಿದೆ. ಡೈರಿಯಲ್ಲಿ ಉಲ್ಲೇಖವಾಗಿರುವ ಪಶುವೈದ್ಯಾಧಿಕಾರಿಗಳ ಎಲಿಜಿಬಿಲಿಟಿ ಲಿಸ್ಟ್‌ನಲ್ಲಿದ್ದ ಇಬ್ಬರು ಅಭ್ಯರ್ಥಿಗಳ ಹೆಸರು ಹಾಗೂ ರಿಜಿಸ್ಟ್ರೇಷನ್ ನಂಬರ್ ಕೆಪಿಎಸ್‌ಸಿ ಬಿಡುಗಡೆ ಮಾಡಿದ್ದ ಅಧಿಕೃತ ಅರ್ಹತಾ ಪಟ್ಟಿಗೆ ನಿಖರವಾಗಿ ಹೋಲಿಕೆಯಾಗುತ್ತಿದೆ. ಒಟ್ಟು 600 ಅಭ್ಯರ್ಥಿಗಳಿದ್ದ ಎಲಿಜಿಬಿಲಿಟಿ ಲಿಸ್ಟ್‌ನಲ್ಲಿ, ಅಂತಿಮ 329 ಮಂದಿಯ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ರೂಪಾಯಿಗೆ ಬೇಡಿಕೆ ಇಡಲಾಗಿತ್ತೇ ಎಂಬ ಗಂಭೀರ ಅನುಮಾನ ವ್ಯಕ್ತವಾಗಿದೆ.

ಅಚ್ಚರಿಯ ಸಂಗತಿಯೆಂದರೆ, ಕನ್ನಾಳೆ ಡೈರಿಯಲ್ಲಿದ್ದ ಇಬ್ಬರು ಅಭ್ಯರ್ಥಿಗಳು ಎಲಿಜಿಬಿಲಿಟಿ ಲಿಸ್ಟ್‌ನಲ್ಲಿದ್ದರೂ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಅವರು ಹಣ ನೀಡಲಿಲ್ಲವೇ ಅಥವಾ ಹಣ ಪಡೆದು ಕನ್ನಾಳೆ ಕೈಕೊಟ್ಟನೇ ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ. ಡೈರಿಯ ಹಾಳೆಯಲ್ಲಿ ಗೋವಿಂದ, ಮಂಜುನಾಥ, ಪದ್ಮಾವತಿ, ಮೋಹನ್‌ ಕುಮಾರ್‌, ಅಶ್ವಿನಿ ಕುಮಾರ್‌, ಪೂಜಾ, ಹರೀಶ್‌, ಸಂಗಮೇಶ್‌ ಎನ್ನುವ ಹೆಸರುಗಳ ಉಲ್ಲೇಖವಾಗಿದೆ.

Must Read