September 30, 2026
Wednesday, September 30, 2026
spot_img

ಎಂಆರ್‌ಪಿಎಲ್‌ ಸ್ಫೋಟ | ಏನಿದು ಕರಾವಳಿಯನ್ನೇ ಬೆಚ್ಚಿಬೀಳಿಸಿದ ಸಿಎಚ್‌ಟಿ ಘಟಕ?

ಹೊಸದಿಗಂತ ವರದಿ ಮಂಗಳೂರು:

ಮಂಗಳೂರಿನ ಬೈಕಂಪಾಡಿಯಲ್ಲಿರುವ ಎಂಆರ್‌ಪಿಎಲ್ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ (ಸಿಎಚ್‌ಟಿಯು)ಸಂಭವಿಸಿದ ಭಾರೀ ಸ್ಫೋಟ ಮತ್ತು ಅಗ್ನಿದುರಂತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು,. ಸದ್ಯ ಬೆಂಕಿ ಹತೋಟಿಗೆ ಬಂದಿದೆ ಎಂದು ಎಂಆರ್ ಪಿ ಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡವರ ಪೈಕಿ ಓರ್ವ ಕಾರ್ಮಿಕನ ಸ್ಥಿತಿ ಸ್ವಲ್ಪ ಗಂಭೀರವಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಿಎಚ್‌ಟಿಯುವಿನಲ್ಲಿ ಸ್ಫೋಟ:

ಸಿಎಚ್‌ಟಿಯು ಕೋಲ್ಡ್ ಸೆಪರೇಟರ್‌ನಲ್ಲಿ ಈ ಸ್ಫೋಟ ಸಂಭವಿಸಿ ಬಳಿಕ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 70 ಬಾರ್ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೋಲ್ಡ್ ಸೆಪರೇಟರ್ ಹಾನಿಗೊಂಡು ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸಂಬಂಧಿತ ಬ್ಯಾಟರಿ ಲಿಮಿಟ್ ಅನ್ನು ಪ್ರತ್ಯೇಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯನಿರ್ವಹಣೆ ಹೇಗೆ?

ಎಂಆರ್‌ಪಿಎಲ್‌ನ ಸಿಎಚ್‌ಟಿಯು ಘಟಕವು ಕೋಕರ್ ಘಟಕದಿಂದ ಬರುವ ಭಾರೀ ಹೈಡ್ರೋಕಾರ್ಬನ್‌ಗಳನ್ನು ಹೈಡ್ರೋಜನ್ ಬಳಸಿ ಶುದ್ಧೀಕರಿಸುವ ಪ್ರಮುಖ ಸಂಸ್ಕರಣಾ ಘಟಕವಾಗಿದೆ.

ಕೋಕರ್‌ನಿಂದ ಬರುವ ಭಾರೀ ಹೈಡ್ರೋಕಾರ್ಬನ್‌ಗಳಿಗೆ ಹೈಡ್ರೋಜನ್‌ನ್ನು ಮಿಶ್ರಣ ಮಾಡಿ, ಹೆಚ್ಚಿನ ಒತ್ತಡ ಮತ್ತು ತಾಪಮಾನದಲ್ಲಿ ಕ್ಯಾಟಲಿಸ್ಟ್ ಹೊಂದಿರುವ ರಿಯಾಕ್ಟರ್‌ಗಳ ಮೂಲಕ ಸಂಸ್ಕರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಇಂಧನದಲ್ಲಿರುವ ಸಲ್ಫರ್, ನೈಟ್ರೋಜನ್ ಸೇರಿದಂತೆ ಹಲವು ಅನಗತ್ಯ ಸಂಯುಕ್ತಗಳನ್ನು ಕಡಿಮೆ ಮಾಡಲಾಗುತ್ತದೆ.

ಸಂಸ್ಕರಣೆಯ ಬಳಿಕ ಉತ್ಪನ್ನವನ್ನು ತಂಪುಗೊಳಿಸಿ ಹೈ-ಪ್ರೆಶರ್ ಕೋಲ್ಡ್ ಸೆಪರೇಟರ್‌ನಲ್ಲಿ ಅನಿಲ ಮತ್ತು ದ್ರವ ಭಾಗಗಳನ್ನು ಪ್ರತ್ಯೇಕಿಸಲಾಗುತ್ತದೆ. ಬೇರ್ಪಟ್ಟ ಅನಿಲದಲ್ಲಿರುವ ಹೈಡ್ರೋಜನ್ ಅನ್ನು ಪ್ರಕ್ರಿಯೆಯಲ್ಲಿ ಮರುಬಳಕೆ ಮಾಡಲಾಗುತ್ತದೆ. ಸಲ್ಫರ್ ಹೊಂದಿರುವ ಸಂಯುಕ್ತಗಳಿಂದ ರೂಪುಗೊಳ್ಳುವ ಹೈಡ್ರೋಜನ್ ಸಲ್ಫೈಡ್‌ನ್ನು ಮುಂದಿನ ಶುದ್ಧೀಕರಣ ಪ್ರಕ್ರಿಯೆಗೆ ಕಳುಹಿಸಲಾಗುತ್ತದೆ.
ಹೀಗಾಗಿ ಸಿಎಚ್‌ಟಿ ಘಟಕವು ರಿಫೈನರಿಯಲ್ಲಿ ಕಡಿಮೆ ಸಲ್ಫರ್ ಮತ್ತು ಉತ್ತಮ ಗುಣಮಟ್ಟದ ಇಂಧನ ಉತ್ಪನ್ನಗಳ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಘಟಕದ ಹಲವು ಪ್ರಕ್ರಿಯೆಗಳು ಹೆಚ್ಚಿನ ಒತ್ತಡದಲ್ಲಿ ನಡೆಯುವುದರಿಂದ, ಒತ್ತಡದ ಉಪಕರಣಗಳು ಮತ್ತು ಸುರಕ್ಷತಾ ವ್ಯವಸ್ಥೆಗಳು ಅತ್ಯಂತ ಮಹತ್ವದ್ದಾಗಿವೆ.

Must Read