October 1, 2026
Thursday, October 1, 2026
spot_img

‘ಸಿಎಂ ಸೋಲಿನ ಭಯದಿಂದ ಚುನಾವಣಾ ಆಯೋಗದ ಎದುರು ಧರಣಿ ಮಾಡುತ್ತಿದ್ದಾರೆ’: ನಿಖಿಲ್ ಕುಮಾರಸ್ವಾಮಿ

ಹೊಸದಿಗಂತ ವರದಿ ರಾಮನಗರ:

ಚುನಾವಣಾ ಆಯೋಗದ ಎದುರು ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಧರಣಿಯು ಸೋಲಿನ ಭಯದಿಂದ ಮಾಡುತ್ತಿರುವ ಹತಾಶೆಯ ನಾಟಕ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ ಒಂದು ಸ್ವತಂತ್ರ, ನಿಷ್ಪಕ್ಷಪಾತ ಮತ್ತು ಸಂವಿಧಾನಬದ್ಧ ಸಂಸ್ಥೆ. ದೇಶದಲ್ಲಿ ಹಲವು ರಾಜ್ಯಗಳಲ್ಲಿ ಎಸ್.ಐ.ಆರ್ ಪ್ರಕ್ರಿಯೆಯು ಬಹಳ ಚೆನ್ನಾಗಿ, ಅಚ್ಚುಕಟ್ಟಾಗಿ ಮತ್ತು ಪಾರದರ್ಶಕವಾಗಿ ನಡೆದಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಈಗ ಸೋಲಿನ ಭಯ ಶುರುವಾಗಿದೆ ಎಂದರು.

ಕಾಂಗ್ರೆಸ್ ಪಕ್ಷವು ಬ್ಯಾಕ್ ಟು ಬ್ಯಾಕ್ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡು ಸಂಪೂರ್ಣ ಹತಾಶೆಗೊಂಡಿದೆ. ಇಡೀ ದೇಶದಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೆ ಉಳಿದಿರುವುದು ಕರ್ನಾಟಕ ಒಂದೇ ರಾಜ್ಯ. ಆ ಒಂದು ರಾಜ್ಯವನ್ನು ಉಳಿಸಿಕೊಳ್ಳಲು ಈಗ ಇಲ್ಲಿ ಹೋರಾಟ, ಧರಣಿ ನಾಟಕ ಮಾಡುತ್ತಿದೆ. ರಾಜ್ಯದಲ್ಲೂ ಇವರಿಗೆ ಸೋಲಿನ ಭಯ ಶುರುವಾಗಿರುವುದರಿಂದಲೇ ಈಗ ಭಾರತ್ ಜೋಡೋ 2.O ಹೆಸರಿನಲ್ಲಿ ಮತ್ತೆ ಜನರನ್ನು ದಾರಿ ತಪ್ಪಿಸಲು ಹೊರಟಿದ್ದಾರೆ ಎಂದು ತಿಳಿಸಿದರು.

ಚೆನ್ನಮ್ಮ ಹೆಸರಿನಲ್ಲಿ ರಾಜಕೀಯ ಬೇಡ:

ಚೆನ್ನಮ್ಮ ಅವರಿಗೆ ಆದಾಯ ತೆರಿಗೆ ನೋಟಿಸ್ ನೀಡಲಾಗಿತ್ತು ಎಂಬ ಸಚಿವ ಬಾಲಕೃಷ್ಣ ಅವರ ಆರೋಪಕ್ಕೆ ಚೆನ್ನಮ್ಮ ಅವರ ವಿಚಾರದಲ್ಲಿ ಸಚಿವ ಬಾಲಕೃಷ್ಣ ಅವರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ಕುರಿತು ಮಾಜಿ ಶಾಸಕರಾದ ಎ. ಮಂಜುನಾಥ್ ಅವರು ಈಗಾಗಲೇ ದಾಖಲೆ ಸಮೇತ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದರು.

ಆದಾಯ ತೆರಿಗೆ ಕಟ್ಟುವುದು ಒಂದು ದಿನ ತಡವಾದರೂ ಐಟಿ ಅಧಿಕಾರಿಗಳು ನೋಟಿಸ್ ನೀಡುವುದು ಸಾಮಾನ್ಯ ಪ್ರಕ್ರಿಯೆ. ನೋಟಿಸ್ ಎಂದರೆ ತೆರಿಗೆ ಬಾಕಿ ಇದೆ ಎಂದು ಗಮನಕ್ಕೆ ತರುವುದು ಅಷ್ಟೇ. ಇದನ್ನೇ ದೊಡ್ಡ ಅಪರಾಧದಂತೆ ಬಿಂಬಿಸುತ್ತಿರುವುದು ಸರಿಯಲ್ಲ. ರಾಜಕೀಯ ಲಾಭಕ್ಕಾಗಿ, ರಾಜಕೀಯ ದ್ವೇಷಕ್ಕಾಗಿ ಚೆನ್ನಮ್ಮನವರಂತಹ ಹಿರಿಯರ ಹೆಸರನ್ನು ಎಳೆದು ತರುವುದು ಖಂಡನೀಯ ಎಂದರು.

ಎನ್ ಡಿ ಎ ಗೆಲುವಿನ ಕಾರ್ಯತಂತ್ರದ ಬಗ್ಗೆ ಚರ್ಚೆ

ರಾಮನಗರದಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ಎನ್‌ಡಿಎ ಮೈತ್ರಿಕೂಟದ ಪ್ರಮುಖರ ಸಮನ್ವಯ ಸಭೆಯು ಇಲ್ಲಿನ ಆರ್.ವಿ.ಸಿ.ಎಸ್ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಸಭೆಯಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ, ಮತದಾರರನ್ನು ಸಂಪರ್ಕಿಸುವ ವಿಧಾನ, ಶಿಕ್ಷಕರ ಬೇಡಿಕೆಗಳು ಮತ್ತು ಎನ್‌ಡಿಎ ಅಭ್ಯರ್ಥಿ ಶಎ.ಪಿ. ರಂಗನಾಥ್ ಅವರ ಗೆಲುವಿಗೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.

ಈ ವೇಳೆ ನಿಖಿಲ್ ಕುಮಾರಸ್ವಾಮಿ ಅವರು , ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಯಾವುದೇ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಪ್ರತಿಯೊಬ್ಬ ಶಿಕ್ಷಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಎನ್‌ಡಿಎ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ಮನವರಿಕೆ ಮಾಡಿ, ಎನ್‌ಡಿಎ ಅಭ್ಯರ್ಥಿ ಪರ ಮತ ಹಾಕಿಸುವಂತೆ ಮನವೊಲಿಸಬೇಕು ಎಂದು ಸೂಚನೆ ನೀಡಿದರು.

ಇದನ್ನೂ ಓದಿ:

ಈ ಸಂದರ್ಭದಲ್ಲಿ ಸಂಸದ ಡಾ.ಸಿ.ಎನ್. ಮಂಜುನಾಥ್, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ವಿಧಾನಪರಿಷತ್ ಸದಸ್ಯ  ದೇವೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಮುತ್ತು, ಬಿಜೆಪಿ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ, ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ಮುಖಂಡರಾದ ಗೌತಮ ಗೌಡ, ಗೋವಿಂದಹಳ್ಳಿ ನಾಗರಾಜು, ಚೇತನ, ಪ್ರಸಾದ್ ಗೌಡ, ರಾಮು, ನಾಗರಾಜು, ಗಿರಿಗೌಡ, ಉಮೇಶ್, ಸ್ಟೂಡಿಯೋ ಚಂದ್ರು, ರಾಮಕೃಷ್ಣಪ್ಪ ಹಾಗೂ ಇತರರು ಇದ್ದರು.

Must Read