October 3, 2026
Saturday, October 3, 2026
spot_img

ಅನ್ಯಾಯದ ಚುನಾವಣೆ ನಡೆದಿರುವ ಕಡೆ ಬ್ಯಾಲೆಟ್‌ ಪೇಪರ್‌ ಮೂಲಕ ಎಲೆಕ್ಷನ್‌ ನಡೆಯಬೇಕು: ಖರ್ಗೆ ಆಗ್ರಹ

ಹೊಸದಿಗಂತ ವರದಿ ಕಲಬುರಗಿ:

ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆ ನ್ಯಾಯಸಮ್ಮತವಾಗಿಲ್ಲ ಎಂದು ಆರೋಪಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಲ್ಲೆಲ್ಲಿ ಅನ್ಯಾಯದ ಮೂಲಕ ಚುನಾವಣೆ ನಡೆದಿದೆ ಎಂದು ಆರೋಪಿಸಲಾಗುತ್ತಿದೆಯೋ ಅಲ್ಲಿ ಚುನಾವಣೆಗಳನ್ನು ರದ್ದುಪಡಿಸಿ ಮತ್ತೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರ ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡಲಾಗಿದೆ ಎಂದು ಆರೋಪಿಸಿದರು. ಈ ಕಾನೂನು ಕೇಂದ್ರ ಸರ್ಕಾರವು ದುರುದ್ದೇಶದಿಂದ ಜಾರಿಗೆ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಖರ್ಗೆ ಆರೋಪ ಮಾಡಿದರು.

ಚುನಾವಣಾ ಆಯೋಗದ ಇಬ್ಬರು ಸದಸ್ಯರು ಕೆಲವು ವಿಚಾರಗಳನ್ನು ಬಹಿರಂಗವಾಗಿ ಹೇಳುತ್ತಿದ್ದಾರೆ ಎಂದು ಉಲ್ಲೇಖಿಸಿದ ಖರ್ಗೆ, ಮತಗಳಲ್ಲಿ ಬದಲಾವಣೆ, ಇವಿಎಂ ಕುರಿತು ನಿರ್ದೇಶನ ಸೇರಿದಂತೆ ಚುನಾವಣಾ ಪ್ರಕ್ರಿಯೆಯಲ್ಲಿ ಆಯೋಗದ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಈ ಆರೋಪಗಳು ಸಾಬೀತಾಗಿವೆ ಎಂಬುದಾಗಿ ಹೇಳದೆ, ಅವುಗಳ ಆಧಾರದ ಮೇಲೆ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆ ಬಗ್ಗೆ ಖರ್ಗೆ ಪ್ರಶ್ನಿಸಿದರು.

ಇವಿಎಂ ದೇಶದ ಪ್ರಜಾಪ್ರಭುತ್ವಕ್ಕೆ ಹಾನಿ ಮಾಡುತ್ತಿದೆ ಎಂಬುದು ತಮ್ಮ ಪಕ್ಷದ ನಿಲುವು ಎಂದು ಹೇಳಿದ ಅವರು, ಮತಪತ್ರದ ಮೂಲಕ ಚುನಾವಣೆ ನಡೆಸಿದರೆ ಉತ್ತಮ ಎಂದು ಅಭಿಪ್ರಾಯಪಟ್ಟರು. ಈ ಕುರಿತು ವಿವಿಧ ಪಕ್ಷಗಳೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

Must Read