ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮಾನದಲ್ಲೇ ಸಹ-ಪೈಲಟ್‌ನ ದಾಳಿಗೆ ಗುರಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ದುಬೈ ಯುವರಾಜ ಹಾಗೂ ಯುಎಇ ಉಪ ಪ್ರಧಾನಮಂತ್ರಿ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಆಸ್ಪತ್ರೆಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಸಂಕಷ್ಟದ ನಡುವೆಯೂ ಕಾಕ್‌ಪಿಟ್ ಬಾಗಿಲು ತೆರೆಯುವ ಮೂಲಕ ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ ಸ್ಮಿತ್ ಅವರ ಧೈರ್ಯವನ್ನು ಯುವರಾಜ ಶ್ಲಾಘಿಸಿದ್ದಾರೆ.
ಸ್ಮಿತ್ ಅವರನ್ನು ಭೇಟಿಯಾದ ಬಳಿಕ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಶೇಖ್ ಹಮ್ದಾನ್, ಯುಎಇ ನಾಯಕತ್ವದ ಪರವಾಗಿ ಪೈಲಟ್‌ಗೆ ಸಂಪೂರ್ಣ ಮೆಚ್ಚುಗೆ ಮತ್ತು ಗೌರವವಿದೆ ಎಂದು ತಿಳಿಸಿದ್ದಾರೆ. ಮಾನವೀಯತೆ, ಶಾಂತಿ ಹಾಗೂ ಜೀವಕ್ಕೆ ಮೌಲ್ಯ ನೀಡುವ ಯುಎಇಯ ಮೌಲ್ಯಗಳ ಪ್ರತಿನಿಧಿಯಾಗಿ ಸ್ಮಿತ್ ಅವರ ಕಾರ್ಯವನ್ನು ಅವರು ಬಣ್ಣಿಸಿದ್ದಾರೆ. ಆಸ್ಪತ್ರೆಯಲ್ಲಿ ಸ್ಮಿತ್ ಅವರೊಂದಿಗೆ ಮಾತನಾಡಿ, ಅವರನ್ನು ಅಪ್ಪಿಕೊಂಡಿರುವ ಚಿತ್ರಗಳನ್ನೂ ಅವರು ಹಂಚಿಕೊಂಡಿದ್ದಾರೆ.
ಏನಿದು ಘಟನೆ?
ಸೆಪ್ಟೆಂಬರ್ 30ರಂದು ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ FZ1073 ವಿಮಾನದಲ್ಲಿ ಘಟನೆ ನಡೆದಿತ್ತು. ಕಾಕ್‌ಪಿಟ್‌ನಲ್ಲಿದ್ದ ಸಹ-ಪೈಲಟ್ ಕ್ಯಾಪ್ಟನ್ ಸ್ಮಿತ್ ಮೇಲೆ ದಾಳಿ ನಡೆಸಿದ ಬಳಿಕ ವಿಮಾನ ತೀವ್ರವಾಗಿ ಕೆಳಮುಖವಾಗಿ ಇಳಿಯತೊಡಗಿತ್ತು. ಗಂಭೀರ ಗಾಯಗೊಂಡಿದ್ದರೂ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸ್ಮಿತ್ ಕಾಕ್‌ಪಿಟ್ ಬಾಗಿಲು ತೆರೆಯಲು ಮುಂದಾದರು. ಇದರಿಂದ ಪ್ರಯಾಣಿಕರು ಹಾಗೂ ಸಿಬ್ಬಂದಿ ಒಳಗೆ ಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಿಸಲು ಸಾಧ್ಯವಾಯಿತು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್‌ಗೆ ತಿರುಗಿಸಿ ಸುರಕ್ಷಿತವಾಗಿ ಇಳಿಸಲಾಯಿತು.
ಘಟನೆಯ ಬಳಿಕ ಸ್ಮಿತ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಯುಎಇಗೆ ಸ್ಥಳಾಂತರಿಸಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಯುಎಇ ನಾಗರಿಕ ವಿಮಾನಯಾನ ಪ್ರಾಧಿಕಾರವೂ ಸ್ಮಿತ್, ಸಿಬ್ಬಂದಿ ಹಾಗೂ ಪ್ರಯಾಣಿಕರ ತ್ವರಿತ ಪ್ರತಿಕ್ರಿಯೆಯನ್ನು ಶ್ಲಾಘಿಸಿದೆ.
ಭಯೋತ್ಪಾದಕ ಕೃತ್ಯ
ಇದೀಗ ಪ್ರಕರಣದ ತನಿಖೆ ಮುಂದುವರಿದಿದ್ದು, ಯುಎಇ ಅಟಾರ್ನಿ ಜನರಲ್ ತನಿಖೆಯಲ್ಲಿ ಸಹ-ಪೈಲಟ್ ಭಯೋತ್ಪಾದಕ ಕೃತ್ಯ ನಡೆಸಲು ಪ್ರಯತ್ನಿಸಿದ್ದಾನೆ ಎಂಬುದು ಬಹಿರಂಗವಾಗಿದೆ ಎಂದು ತಿಳಿಸಿದ್ದಾರೆ. ಕೃತ್ಯದ ಹಿಂದಿನ ಉದ್ದೇಶ, ಸಂಪೂರ್ಣ ಹಿನ್ನೆಲೆ ಹಾಗೂ ಇತರ ಸಂಪರ್ಕಗಳ ಕುರಿತು ತನಿಖೆ ಮುಂದುವರಿದಿದೆ.



