ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಹವಾಮಾನದಲ್ಲಿ ಏರುಪೇರು ಉಂಟಾಗಿದ್ದು, ಒಂದೆಡೆ ಮಳೆಯಾಗುತ್ತಿದ್ದರೆ ಮತ್ತೊಂದೆಡೆ ಬಿಸಿಲಿನ ವಾತಾವರಣ ಮುಂದುವರೆದಿದೆ. ಕರಾವಳಿ ತೀರದ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ ಬಿಸಿಲು ಹಾಗೂ ಸಾಧಾರಣ ಮಳೆಯ ಮಿಶ್ರ ವಾತಾವರಣ ಕಂಡುಬರುತ್ತಿದೆ.
ಮುಂದಿನ ಕೆಲ ದಿನಗಳಲ್ಲಿ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನಲ್ಲಿ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಮತ್ತು ಒಳನಾಡಿನ ಸ್ಥಿತಿ
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಇತ್ತ ಉತ್ತರ ಒಳನಾಡಿನ ಧಾರವಾಡ, ಬೆಳಗಾವಿ ಹಾಗೂ ಹಾವೇರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗಲಿದ್ದು, ಬೀದರ್, ಕಲ್ಬುರ್ಗಿ, ರಾಯಚೂರು, ವಿಜಯಪುರ, ಗದಗ, ಯಾದಗಿರಿ, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆಯಿಲ್ಲದೆ ಒಣ ಹವೆ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.
ದಕ್ಷಿಣ ಒಳನಾಡಿನ ಭಾಗಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ, ರಾಮನಗರ, ತುಮಕೂರು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಆದರೆ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆದಿದೆ.



