ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಗುಂಡಿ ರಸ್ತೆಗಳು, ಧೂಳು ತುಂಬಿದ ಬೀದಿಗಳ ಜೊತೆ ಏಗಾಡಿ ಸಾಕಾಯಿತು, ಬದಲಾವಣೆ ಕಾಣಿಸ್ತಾ ಇಲ್ಲ ಎಂದು ಲಾಜಿಸ್ಟಿಕ್ ಕಂಪನಿಯಾದ ಬ್ಲಾಕ್‌ಬಕ್ ತನ್ನ ಬೆಂಗಳೂರು ಕಚೇರಿಯನ್ನು ಸ್ಥಳಾಂತರಿಸುತ್ತಿದೆ.
ಕಳೆದ ಒಂಬತ್ತು ವರ್ಷಗಳಿಂದ ಔಟರ್ ರಿಂಗ್ ರೋಡ್‌ನಲ್ಲಿ ಬೆಳ್ಳಂದೂರಿನಿಂದ ಕಾರ್ಯನಿರ್ವಹಿಸುತ್ತಿದ್ದ ಕಂಪನಿಯು, ಹದಗೆಟ್ಟಿರುವ ರಸ್ತೆ ಮೂಲಸೌಕರ್ಯ ಉದ್ಯೋಗಿಗಳಿಗೆ ಕೆಲಸ ಮಾಡುವುದನ್ನು ಹೆಚ್ಚು ಕಷ್ಟಕರವಾಗಿಸಿದೆ ಎಂದು ಹೇಳಿದೆ.
ಬ್ಲ್ಯಾಕ್‌ಬಕ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ರಾಜೇಶ್ ಯಬಾಜಿ, ORR ನಲ್ಲಿರುವ ಕಂಪನಿಯ ನೆಲೆಯು ಸುಮಾರು ಒಂದು ದಶಕದಿಂದ ‘ಕಚೇರಿ ಮತ್ತು ಮನೆ’ ಎರಡೂ ಆಗಿತ್ತು. ಆದಾಗ್ಯೂ, ಹಾಳಾದ ರಸ್ತೆಗಳು, ಗುಂಡಿಗಳು ಮತ್ತು ಧೂಳಿನಿಂದಾಗಿ ಪರಿಸ್ಥಿತಿ ಅಸಹನೀಯವಾಗಿದೆ ಎಂದಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಇಲ್ಲಿ ಮುಂದುವರಿಯುವುದು ಈಗ ತುಂಬಾ ಕಷ್ಟ. ನಾವು ಹೊರಹೋಗಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಉದ್ಯೋಗಿಗಳಿಗೆ ಸರಾಸರಿ ಏಕಮುಖ ಪ್ರಯಾಣವು 1.5 ಗಂಟೆಗಳಿಗೂ ಹೆಚ್ಚಾಗಿದ್ದು, ಉತ್ಪಾದಕತೆ ಮತ್ತು ಕೆಲಸ-ಜೀವನದ ಸಮತೋಲನದ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಪ್ರದೇಶದ ನಾಗರಿಕರು ಮತ್ತು ವ್ಯವಹಾರಗಳು ಪದೇ ಪದೆ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರೂ, ರಸ್ತೆಗಳು ಗುಂಡಿಗಳು ಮತ್ತು ಧೂಳಿನಿಂದ ತುಂಬಿವೆ. ಅವುಗಳನ್ನು ಸರಿಪಡಿಸುವ ಉದ್ದೇಶ ಕಾಣಿಸುತ್ತಿಲ್ಲ. ಮುಂದಿನ 5 ವರ್ಷಗಳಲ್ಲಿಯೂ ಇದರಲ್ಲಿ ಯಾವುದೇ ಬದಲಾವಣೆ ಕಾಣುವ ಸಾಧ್ಯತೆ ಇಲ್ಲ. ಇದರಿಂದಾಗಿ ಬ್ಲ್ಯಾಕ್‌ಬಕ್ ಕಾರ್ಯಾಚರಣೆ ಸ್ಥಳವನ್ನು ಬದಲಾಯಿಸುವ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಯಬಾಜಿ ಹೇಳಿದ್ದಾರೆ.