Tuesday, September 30, 2025

ಕ್ರಿಕೆಟ್‌ಗೆ ಕೊಳಕು ದಿನ, ಭಾರತವನ್ನು ಬ್ಯಾನ್‌ ಮಾಡಬೇಕು: ಪಾಕ್ ಮಾಜಿ ನಾಯಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾ ಕಪ್‌ ಟ್ರೋಫಿ ಪಡೆಯಲು ನಿರಾಕರಿಸಿದ್ದ ಭಾರತ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಟೂರ್ನಿಗಳಿಂದ ಅಮಾನತುಗೊಳಿಸಬೇಕೆಂದು ಪಾಕಿಸ್ತಾನ ಮಾಜಿ ನಾಯಕ ರಶೀದ್‌ ಲತಿಫ್‌ ಅವರು ಆಗ್ರಹಿಸಿದ್ದಾರೆ.

ಇಂಥಾ ವರ್ತನೆಗಳು ಕ್ರೀಡೆಯಲ್ಲಿನ ಶಿಸ್ತು ಕ್ರಮಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದರೆ, ಐಸಿಸಿ ಆಡಳಿತ ಮಂಡಳಿಯಲ್ಲಿ ಭಾರತೀಯರ ನಾಯಕತ್ವ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಟೀಮ್‌ ಇಂಡಿಯಾ ವಿರುದ್ದ ಐಸಿಸಿ ಶಿಕ್ಷೆಯನ್ನು ನೀಡುವುದು ಅನುಮಾನ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೇರೆ ಯಾವುದೇ ಕ್ರೀಡೆಯಲ್ಲಿ ಇದು ಮುಕ್ತ ಮತ್ತು ಮುಚ್ಚಿದ ಪ್ರಕರಣವಾಗುತ್ತಿತ್ತು. ಆದರೆ ಐಸಿಸಿ ಅಧ್ಯಕ್ಷರು, ಸಿಇಒ, ಸಿಎಫ್‌ಒ, ವಾಣಿಜ್ಯ ಮುಖ್ಯಸ್ಥರು ಮತ್ತು ಈವೆಂಟ್ಸ್ ಮತ್ತು ಕಮ್ಯುನಿಕೇಷನ್ಸ್ ಮುಖ್ಯಸ್ಥರು ಭಾರತೀಯರಾಗಿರುವುದರಿಂದ, ಅಮಾನತುಗೊಳಿಸುವ ಸಾಧ್ಯತೆ ಕಡಿಮೆ ಎಂದು ತೋರುತ್ತದೆ ಎಂದು ರಶೀದ್‌ ಲತಿಫ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹೇಳಿದ್ದಾರೆ.

ಭಾರತ ಮತ್ತೊಮ್ಮೆ ಸಜ್ಜನರ ಆಟದ ಸ್ಫೂರ್ತಿ ಮತ್ತು ಸಾರವನ್ನು ಉಲ್ಲಂಘಿಸಿದ್ದು ಕ್ರಿಕೆಟ್‌ಗೆ ಕೊಳಕು ದಿನ, ಅದು ಕೂಡ ಹಗಲು ಹೊತ್ತಿನಲ್ಲಿ, ಎಂದು ರಶೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.