ಹೊಸದಿಗಂತ ಶ್ರೀರಂಗಪಟ್ಟಣ:
ಪ್ರವಾಸಿಗರ ನೆಚ್ಚಿನ ತಾಣವಾದ ಬೆಳಗೊಳ ಸಮೀಪದ ಎಡಮುರಿಯಲ್ಲಿ ಕಾವೇರಿ ನದಿಗೆ ಈಜಲು ಇಳಿದ ಬೆಂಗಳೂರು ಮೂಲದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ.
ಬೆಂಗಳೂರಿನ ರಾಮಮೂರ್ತಿ ನಗರದ ನಿವಾಸಿ ಪಾಂಡೆಯನ್ ಎಂಬುವವರ ಪುತ್ರ ವಿಘ್ನೇಶ ಪಿ (27) ಮೃತ ದುರ್ದೈವಿ. ವೀಕೆಂಡ್ ಪ್ರವಾಸಕ್ಕಾಗಿ ವಿಘ್ನೇಶ ತನ್ನ ನಾಲ್ವರು ಸ್ನೇಹಿತರೊಂದಿಗೆ ಬಲಮುರಿ ಮತ್ತು ಎಡಮುರಿ ಪ್ರವಾಸಿ ತಾಣಗಳಿಗೆ ಆಗಮಿಸಿದ್ದರು. ಎಡಮುರಿಯಲ್ಲಿ ನದಿ ನೀರನ್ನು ಕಂಡ ಸ್ನೇಹಿತರು ಈಜಲು ಮುಂದಾಗಿದ್ದಾರೆ. ಆದರೆ ನದಿಯ ನೀರಿನ ಸೆಳೆತಕ್ಕೆ ಸಿಲುಕಿದ ವಿಘ್ನೇಶ ಈಜಲಾಗದೆ ನೀರಿನಲ್ಲಿ ಮುಳುಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಕೆ.ಆರ್.ಎಸ್ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದರು. ನದಿಯಲ್ಲಿ ಮುಳುಗಿದ್ದ ವಿಘ್ನೇಶನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಮೃತನ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಮಗನ ಸಾವಿನ ಸುದ್ದಿ ಕೇಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



