February 11, 2026
Wednesday, February 11, 2026
spot_img

ದಕ್ಷಿಣ ಕೊಡಗಿನ ಜನರ ಆತಂಕಕ್ಕೆ ಬ್ರೇಕ್: ಅರಣ್ಯ ಇಲಾಖೆಯ ‘ಆಪರೇಷನ್ ಟೈಗರ್’ ಸಕ್ಸಸ್!

ಹೊಸದಿಗಂತ ಮಡಿಕೇರಿ:

ಕಳೆದ ಹತ್ತು ದಿನಗಳಿಂದ ದಕ್ಷಿಣ ಕೊಡಗಿನ ಜನರ ನಿದ್ದೆಗೆಡಿಸಿದ್ದ, ಹತ್ತು ಹಸುಗಳನ್ನು ಬಲಿ ಪಡೆದು ಆತಂಕ ಸೃಷ್ಟಿಸಿದ್ದ ಹುಲಿಯ ಅಬ್ಬರಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಪೊನ್ನಂಪೇಟೆ ತಾಲೂಕಿನ ಬೆಸಗೂರು ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ, ಸುಮಾರು 6 ವರ್ಷದ ಗಂಡು ಹುಲಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.

ಬೆಸಗೂರು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಹುಲಿಯ ಹಾವಳಿ ಕಂಡುಬಂದಿತ್ತು. ಕಳೆದ ಭಾನುವಾರವೊಂದೇ ರಾತ್ರಿ ಮೂರು ಹಸುಗಳನ್ನು ಸಾಯಿಸುವ ಮೂಲಕ ಹುಲಿ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಇದರಿಂದ ಆಕ್ರೋಶಗೊಂಡ ರೈತ ಸಂಘದ ಸದಸ್ಯರು ಪ್ರತಿಭಟನೆ ನಡೆಸಿ, ಹುಲಿಯನ್ನು ಕೂಡಲೇ ಸೆರೆಹಿಡಿಯುವಂತೆ ಒತ್ತಾಯಿಸಿದ್ದರು. ಸಾರ್ವಜನಿಕರ ಹಿತದೃಷ್ಟಿಯಿಂದ ಶಾಸಕ ಎ.ಎಸ್. ಪೊನ್ನಣ್ಣ ಅವರು ಕೂಡಲೇ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಎಸಿಎಫ್ ಗೋಪಾಲ್ ಅವರ ನೇತೃತ್ವದಲ್ಲಿ ನಡೆದ ಈ ಬೃಹತ್ ಕಾರ್ಯಾಚರಣೆಯಲ್ಲಿ ಸುಮಾರು 80 ಅರಣ್ಯ ಸಿಬ್ಬಂದಿ ಪಾಲ್ಗೊಂಡಿದ್ದರು. ಹುಲಿಯನ್ನು ಪತ್ತೆಹಚ್ಚಲು ಎರಡು ಸಾಕಾನೆಗಳನ್ನು ಬಳಸಿಕೊಳ್ಳಲಾಗಿತ್ತು. ಮಂಗಳವಾರ ರಾತ್ರಿ ಅರಣ್ಯ ಇಲಾಖೆಯ ಚಾಣಾಕ್ಷ ನಡೆಗೆ ಹುಲಿ ಬಲೆಯಾಗಿದ್ದು, ಸದ್ಯ ಅದನ್ನು ಸುರಕ್ಷಿತವಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ.

ಹಲವು ದಿನಗಳ ಬಳಿಕ ಹುಲಿ ಸೆರೆಯಾಗಿರುವುದು ಕೊಡಗಿನ ರೈತರು ಮತ್ತು ಗ್ರಾಮಸ್ಥರಲ್ಲಿ ನೆಮ್ಮದಿ ತಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !