March 13, 2026
Friday, March 13, 2026
spot_img

ರಾಜ್ಯದ ಕಾರಾಗೃಹಗಳಲ್ಲಿ ‘ಗಾಂಜಾ’ ಗಲಾಟೆಗೆ ಬ್ರೇಕ್: ಕೈದಿಗಳಿಗೆ ಇನ್ಮುಂದೆ NDPS ಟೆಸ್ಟ್ ಕಡ್ಡಾಯ!

ಹೊಸದಿಗಂತ ಹುಬ್ಬಳ್ಳಿ:

ರಾಜ್ಯದ ಕಾರಾಗೃಹಗಳಲ್ಲಿ ಗಾಂಜಾ ಮತ್ತು ಮೊಬೈಲ್ ಬಳಕೆಯ ಹಾವಳಿಗೆ ಬ್ರೇಕ್ ಹಾಕಲು ಕಾರಾಗೃಹ ಇಲಾಖೆ ಈಗ ಫೀಲ್ಡಿಗಿಳಿದಿದೆ. ಇನ್ಮುಂದೆ ಜೈಲಿಗೆ ಬರುವ ಮತ್ತು ಬಿಡುಗಡೆಯಾಗಿ ಹೋಗುವ ಪ್ರತಿಯೊಬ್ಬ ಕೈದಿಯನ್ನು NDPS (ಮಾದಕ ವಸ್ತು ಸೇವನೆ) ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರು ಮಹತ್ವದ ಘೋಷಣೆ ಮಾಡಿದ್ದಾರೆ.

ನಗರದ ಅಶೋಕನಗರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ಹೊಸ ಪರೀಕ್ಷಾ ಪದ್ಧತಿಯು ಮುಂದಿನ ಒಂದು ವಾರದಲ್ಲಿ ರಾಜ್ಯಾದ್ಯಂತ ಜಾರಿಗೆ ಬರಲಿದೆ.

ಜೈಲಿನಲ್ಲಿರುವ ಬಹುತೇಕರು ಗಾಂಜಾ ವ್ಯಸನಿಗಳಾಗಿರುವುದು ಗಮನಕ್ಕೆ ಬಂದಿದೆ. ಇದನ್ನು ತಡೆಯಲು ಕೈದಿಗಳ ಮೇಲೆ ನಿರಂತರ ನಿಗಾ ಇಡುವುದರ ಜೊತೆಗೆ ಶಿಸ್ತು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಜೈಲಿನಿಂದ ಬಿಡುಗಡೆಯಾಗುವಾಗ ಕೈದಿಗಳು ಉತ್ತಮ ನಾಗರಿಕರಾಗಿ ಹೊರಹೋಗಬೇಕು ಎಂಬುದು ಇಲಾಖೆಯ ಆಶಯ. ಇದಕ್ಕಾಗಿ ಹುಬ್ಬಳ್ಳಿ ಜೈಲಿನಲ್ಲಿರುವ 132 ಕೈದಿಗಳಿಗೆ ನಿತ್ಯ ಯೋಗ ಮತ್ತು ಧ್ಯಾನಗಳನ್ನು ಮಾಡಿಸಲಾಗುತ್ತಿದೆ.

ಕೈದಿಗಳು ಬಿಡುಗಡೆಯಾದ ಮೇಲೆ ಸಮಾಜದಲ್ಲಿ ಗೌರವಯುತವಾಗಿ ಬದುಕಲು ಅವರಿಗೆ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಾನಿಕ್ ವಿಭಾಗಗಳಲ್ಲಿ ತಾಂತ್ರಿಕ ತರಬೇತಿ ನೀಡಲಾಗುತ್ತಿದೆ.

ಹಳೆಯ ಅಪರಾಧಿಗಳ ಸಹವಾಸದಿಂದ ಯುವ ಕೈದಿಗಳು ಹಾಳಾಗಬಾರದು ಎಂಬ ಉದ್ದೇಶದಿಂದ ಅವರಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ.

“ಹಿಂದೆ ಜೈಲಿನಲ್ಲಿ ಮೊಬೈಲ್ ಬಳಕೆ ನಡೆಯುತ್ತಿತ್ತು, ಆದರೆ ಈಗ ಅದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಡಿವಾಣ ಹಾಕಲಾಗಿದೆ. ತಪಾಸಣೆ ವೇಳೆ ಯಾವುದೇ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿಲ್ಲ. ಜೈಲಿನಲ್ಲಿ ಶಿಸ್ತು ಕಾಪಾಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ,” ಎಂದು ಅಲೋಕ್ ಕುಮಾರ್ ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !