Saturday, November 1, 2025

ಕಬ್ಬಿನಾಸೆಗೆ ‘ಚೆಕ್ ಪೋಸ್ಟ್’ ಹಾಕಿದ ಗಜ! ದಿಂಬಂ ರಸ್ತೆಯಲ್ಲಿ ಲಾರಿ ‘ಸರ್ಚ್’, ಟ್ರಾಫಿಕ್ ಜಾಮ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಹಾರ ಅರಸುತ್ತಾ ರಸ್ತೆಗೆ ಇಳಿದ ಕಾಡಾನೆ, ಕಬ್ಬು ಮತ್ತು ತರಕಾರಿಯ ಆಸೆಯಿಂದ ಲಾರಿಯೊಂದನ್ನು ತಪಾಸಣೆ ಮಾಡಿರುವ ವಿಚಿತ್ರ ಘಟನೆ ಚಾಮರಾಜನಗರ ಗಡಿ ಸಮೀಪದ ತಮಿಳುನಾಡಿನ ದಿಂಬಂ-ಬಣ್ಣಾರಿ ರಸ್ತೆಯಲ್ಲಿ ನಡೆದಿದೆ.

ಹೌದು, ಆಹಾರ ಹುಡುಕುತ್ತಾ ಕಾಡಿನಿಂದ ಹೊರಬಂದ ಗಜರಾಜ ರಸ್ತೆಯಲ್ಲಿ ನಿಂತು ಸಂಚರಿಸುವ ವಾಹನಗಳನ್ನು ‘ತಪಾಸಣೆ’ಗೆ ಒಳಪಡಿಸಿದೆ. ಮುಖ್ಯವಾಗಿ, ಲಾರಿಗಳಲ್ಲಿ ಕಬ್ಬು ಅಥವಾ ತರಕಾರಿ ಸಿಗಬಹುದೇ ಎಂದು ಪರೀಕ್ಷಿಸುತ್ತಾ ನಿಂತಿದೆ. ಒಂದು ಲಾರಿಯನ್ನು ತಡೆದು, ಅದರಲ್ಲಿರುವ ಸರಕನ್ನು ಪರಿಶೀಲಿಸಲು ಮುಂದಾಗಿದೆ.

ಕಳೆದ ಕೆಲವು ದಿನಗಳಿಂದ ಈ ಮಾರ್ಗದಲ್ಲಿ ಕಾಡಾನೆಗಳ ಹಾವಳಿ ಕಡಿಮೆಯಾಗಿ, ವಾಹನ ಸವಾರರು ನಿರಾಳವಾಗಿದ್ದರು. ಆದರೆ, ಇದೀಗ ಮತ್ತೆ ಕಬ್ಬು ಮತ್ತು ತರಕಾರಿ ಮೇಲಿನ ಆಸೆಯಿಂದ ಆನೆಗಳು ಹೆದ್ದಾರಿಗೆ ಲಗ್ಗೆ ಇಟ್ಟಿವೆ. ಆನೆ ರಸ್ತೆಗೆ ಅಡ್ಡಲಾಗಿ ನಿಂತಿದ್ದರಿಂದ ಕೆಲಕಾಲ ದಿಂಬಂ-ಬಣ್ಣಾರಿ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿ, ಟ್ರಾಫಿಕ್ ಜಾಮ್ ಉಂಟಾಗಿತ್ತು. ಅರಣ್ಯ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು, ಆನೆಯನ್ನು ಕಾಡಿಗೆ ಅಟ್ಟಿದ ಬಳಿಕ ಸಂಚಾರ ಎಂದಿನಂತೆ ಸುಗಮಗೊಂಡಿತು.

error: Content is protected !!