ಹೊಸದಿಗಂತ ದಾಂಡೇಲಿ:
ಪ್ರಕೃತಿಯ ಮಡಿಲಲ್ಲಿರುವ ಹಸನ್ಮಾಳದ ಕೆರೆಯಲ್ಲಿ ರವಿವಾರ ಮಧ್ಯಾಹ್ನ ಪ್ರಾಣಿ ಸಂಕುಲಗಳ ನಡುವಿನ ಅಳಿವು-ಉಳಿವಿನ ಹೋರಾಟವೊಂದು ನಡೆದಿದೆ. ದಾಹ ತಣಿಸಿಕೊಳ್ಳಲು ಕೆರೆಗೆ ಇಳಿದಿದ್ದ ಜಿಂಕೆಯ ಮೇಲೆ ಹೊಂಚು ಹಾಕಿದ್ದ ಮೊಸಳೆಯೊಂದು ಕ್ಷಣಮಾತ್ರದಲ್ಲಿ ದಾಳಿ ನಡೆಸಿ ನೀರೊಳಗೆ ಎಳೆದೊಯ್ದ ಘಟನೆ ವರದಿಯಾಗಿದೆ.
ನಗರದ ಸಮೀಪದ ಹಸನ್ಮಾಳದ ಕೆರೆಗೆ ಕಾಡಿನಿಂದ ಜಿಂಕೆಯೊಂದು ನೀರು ಕುಡಿಯಲು ಬಂದಿತ್ತು. ಈ ವೇಳೆ ಕೆರೆಯಲ್ಲಿದ್ದ ಮೊಸಳೆ ಹಠಾತ್ತನೆ ದಾಳಿ ಮಾಡಿ ಜಿಂಕೆಯನ್ನು ತನ್ನ ದವಡೆಗೆ ಸಿಲುಕಿಸಿಕೊಂಡಿದೆ. ಈ ದೃಶ್ಯವನ್ನು ಗಮನಿಸಿದ ಹತ್ತಿರದಲ್ಲೇ ಇದ್ದ ಬಜರಂಗದಳದ ಗೋ ರಕ್ಷಣಾ ತಂಡದ ಸದಸ್ಯರು, ತಕ್ಷಣವೇ ಜಿಂಕೆಯನ್ನು ರಕ್ಷಿಸಲು ಮುಂದಾದರು. ಮೊಸಳೆಯ ಬಾಯಿಂದ ಜಿಂಕೆಯನ್ನು ಬಿಡಿಸಲು ತಮ್ಮ ಪ್ರಾಣದ ಹಂಗು ತೊರೆದು ಹರಸಾಹಸ ಪಟ್ಟರಾದರೂ, ಮೊಸಳೆಯ ಹಿಡಿತದಿಂದ ಜಿಂಕೆಯನ್ನು ಪಾರು ಮಾಡಲು ಸಾಧ್ಯವಾಗಲಿಲ್ಲ.
ದುರದೃಷ್ಟವಶಾತ್, ಮೊಸಳೆಯ ದಾಳಿಗೆ ಜಿಂಕೆ ಬಲಿಯಾಗಿದೆ. ತಕ್ಷಣವೇ ಜಾಗರೂಕರಾದ ತಂಡದ ಸದಸ್ಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸಿ, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.



