ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ಅನುಮಾನದ ಭೂತ ಹೆಮ್ಮರವಾಗಿ ಬೆಳೆದು, ಕೊನೆಗೆ ಹೆಂಡತಿಯ ಪ್ರಾಣವನ್ನೇ ಬಲಿಪಡೆದ ಘೋರ ಘಟನೆಯೊಂದು ಹೈದರಾಬಾದ್ ನ ನಲ್ಲಕುಂಟಾ ಪ್ರದೇಶದಲ್ಲಿ ಸಂಭವಿಸಿದೆ. ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ, ತಾಯಿಯನ್ನು ರಕ್ಷಿಸಲು ಬಂದ ಮಗಳನ್ನೂ ಸಾವಿನ ದವಡೆಗೆ ದೂಡಲು ಯತ್ನಿಸಿ ಪರಾರಿಯಾಗಿದ್ದಾನೆ.
ಘಟನೆಯ ವಿವರ:
ನಲ್ಲಕುಂಟಾ ನಿವಾಸಿಗಳಾದ ವೆಂಕಟೇಶ್ ಮತ್ತು ತ್ರಿವೇಣಿ ಅವರದ್ದು ಪ್ರೇಮ ವಿವಾಹ. ದಂಪತಿಗೆ ಮಗ ಮತ್ತು ಮಗಳಿದ್ದಾರೆ. ಆದರೆ ಕಳೆದ ಕೆಲವು ಸಮಯದಿಂದ ಪತ್ನಿಯ ನಡತೆಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ವೆಂಕಟೇಶ್, ಆಕೆಗೆ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ. ಕಿರುಕುಳ ತಾಳಲಾರದೆ ತ್ರಿವೇಣಿ ತವರು ಮನೆ ಸೇರಿದ್ದರು. “ನಾನು ಬದಲಾಗುತ್ತೇನೆ” ಎಂದು ನಂಬಿಸಿ ಆಕೆಯನ್ನು ವಾಪಸ್ ಕರೆತಂದಿದ್ದ ವೆಂಕಟೇಶ್, ಡಿಸೆಂಬರ್ 24ರಂದು ಮಕ್ಕಳ ಮುಂದೆಯೇ ಕ್ರೌರ್ಯ ಮೆರೆದಿದ್ದಾನೆ.
ಜಗಳ ವಿಕೋಪಕ್ಕೆ ಹೋದಾಗ ತ್ರಿವೇಣಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ವೇಳೆ ತಾಯಿಯನ್ನು ರಕ್ಷಿಸಲು ಓಡಿ ಬಂದ ಮಗಳನ್ನು ವೆಂಕಟೇಶ್ ಅದೇ ಬೆಂಕಿಗೆ ತಳ್ಳಿದ್ದಾನೆ. ಮಗುವಿನ ಚೀರಾಟ ಮತ್ತು ಬೆಂಕಿಯ ಜ್ವಾಲೆಯನ್ನು ಕಂಡು ನೆರೆಹೊರೆಯವರು ಧಾವಿಸುವಷ್ಟರಲ್ಲಿ ತ್ರಿವೇಣಿ ಸಜೀವ ದಹನಗೊಂಡಿದ್ದರು. ಅದೃಷ್ಟವಶಾತ್ ಮಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಪ್ರಸ್ತುತ ನಲ್ಲಕುಂಟಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿ ವೆಂಕಟೇಶ್ ಪತ್ತೆಗಾಗಿ ಬಲೆ ಬೀಸಿದ್ದಾರೆ.

