ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಟ್ಟುಹಬ್ಬದ ಸಂಭ್ರಮ ಆಚರಿಸಲು ಹೋದ ಯುವಕನೊಬ್ಬ, ಪಾರ್ಟಿಯ ಬಿಲ್ ಕಟ್ಟುವ ವಿಚಾರದಲ್ಲಿ ಸ್ನೇಹಿತರೊಂದಿಗೆ ನಡೆದ ಜಗಳದಲ್ಲಿ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ವಡ್ಡರಪಾಳ್ಯದಲ್ಲಿ ನಡೆದಿದೆ.
ಘಟನೆ ವಿವರ:
ಮೃತರಾದ ಸಂದೀಪ್ ಅಕ್ಟೋಬರ್ 16 ರಂದು ತಮ್ಮ ಬರ್ತ್‌ಡೇ ಆಚರಿಸಿಕೊಳ್ಳಲು ಕುಂಬಾರನಹಳ್ಳಿ ಸಮೀಪದ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಸ್ನೇಹಿತರೊಂದಿಗೆ ತೆರಳಿದ್ದರು. ಅಲ್ಲಿ ಕೇಕ್ ಕತ್ತರಿಸಿದ ಬಳಿಕ, ಎಲ್ಲರೂ ಸೇರಿ ‘ಎಣ್ಣೆ ಪಾರ್ಟಿ’ ಮಾಡಿ ಕಂಠಪೂರ್ತಿ ಕುಡಿದಿದ್ದರು. ದುರಂತವೆಂದರೆ, ಕೊನೆಯಲ್ಲಿ ಪಾರ್ಟಿಯ ಬಿಲ್ ಪಾವತಿಸುವ ವಿಚಾರ ಬಂದಾಗ ಈ ದುರ್ಘಟನೆ ಸಂಭವಿಸಿದೆ.
ಬಿಲ್‌ನಿಂದ ಶುರುವಾದ ಜಗಳ:
ಬಿಲ್ ಕಟ್ಟುವಾಗ, ಸಂದೀಪ್ ತನ್ನ ಬಳಿ ಅಷ್ಟು ಹಣವಿಲ್ಲ ಎಂದು ಹೇಳಿದ್ದಾನೆ. ಇದೇ ಮಾತು ಸಂದೀಪ್ ಮತ್ತು ಆತನ ಸ್ನೇಹಿತ ಸಂತೋಷ್ ನಡುವೆ ತೀವ್ರ ಗಲಾಟೆಗೆ ಕಾರಣವಾಗಿದೆ. ಆರಂಭದಲ್ಲಿ ಅಲ್ಲಿದ್ದ ಇತರ ಸ್ನೇಹಿತರು ಜಗಳ ಬಿಡಿಸಿ, ಇಬ್ಬರನ್ನು ಕಳುಹಿಸಿದ್ದರು.
ಆದರೆ, ಮನೆಗೆ ಹೋಗದ ಸಂದೀಪ್, ನಂತರ ಊರಿನ ಬಳಿಯಿರುವ ವಾಲಿಬಾಲ್ ಕೋರ್ಟ್‌ಗೆ ಮತ್ತೊಮ್ಮೆ ಮದ್ಯಪಾನ ಮಾಡಲು ಹೋಗಿದ್ದಾನೆ. ಈ ವಿಷಯ ತಿಳಿದ ಸಂತೋಷ್ ಮತ್ತು ಆತನ ಮತ್ತೊಬ್ಬ ಸ್ನೇಹಿತ ಸಾಗರ್ ಕೋರ್ಟ್‌ಗೆ ಬಂದಿದ್ದಾರೆ. ಹಳೆಯ ದ್ವೇಷ ತೀರಿಸಿಕೊಳ್ಳಲು ಅಲ್ಲಿ ಏಕಾಏಕಿ ಸಂದೀಪ್ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಸಂದೀಪ್ ಅಲ್ಲಿಂದ ನೇರವಾಗಿ ಜಿಗಣಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದ.
ಚಿಕಿತ್ಸೆ ಫಲಕಾರಿಯಾಗದೆ ಸಾವು:
ಹಲ್ಲೆಯ ನಂತರ ಮನೆಗೆ ಬಂದ ಸಂದೀಪ್‌ಗೆ ತೀವ್ರ ವಾಂತಿ ಮತ್ತು ತಲೆನೋವು ಕಾಣಿಸಿಕೊಂಡಿದೆ. ತಲೆಯೊಳಗಡೆ ರಕ್ತ ಹೆಪ್ಪುಗಟ್ಟಿ ಮೆದುಳಿಗೆ ಪೆಟ್ಟಾಗಿದ್ದರಿಂದ ಈ ಸಮಸ್ಯೆ ಶುರುವಾಗಿತ್ತು. ಹತ್ತಿರದ ಕ್ಲಿನಿಕ್‌ನಲ್ಲಿ ಚುಚ್ಚುಮದ್ದು ಪಡೆದು ಮನೆಗೆ ಬಂದಿದ್ದರೂ, ಒಂದು ದಿನದ ಬಳಿಕ ಮತ್ತೆ ಅದೇ ಸಮಸ್ಯೆ ಉಲ್ಬಣಿಸಿತು.
ಬಳಿಕ ಸಂದೀಪ್‌ನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿನ ವೈದ್ಯರ ಸಲಹೆಯಂತೆ ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಗೆ, ಮತ್ತು ನಂತರ ಮಡಿವಾಳದ ಕಾವೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ, ತಲೆಯ ಗಾಯ ಗಂಭೀರವಾಗಿದ್ದರಿಂದ ಸಂಪೂರ್ಣ ಪ್ರಜ್ಞೆ ಕಳೆದುಕೊಂಡು ಕೋಮಾಕ್ಕೆ ತಲುಪಿದ ಸಂದೀಪ್, ಚಿಕಿತ್ಸೆ ಫಲಿಸದೆ ಅಕ್ಟೋಬರ್ 28 ರಂದು ಕೊನೆಯುಸಿರೆಳೆದಿದ್ದಾನೆ.
ಪೋಷಕರ ಒತ್ತಾಯ, ಆರೋಪಿಗಳ ಬಂಧನ:
ಮಗನ ಸಾವಿನಿಂದ ಆಕ್ರಂದನಗೊಂಡಿರುವ ಪೋಷಕರು, ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ. ಮೃತ ಸಂದೀಪ್ ತಂದೆ ನೀಡಿದ ದೂರಿನ ಮೇರೆಗೆ ಜಿಗಣಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಾದ ಸಂತೋಷ್ ಮತ್ತು ಸಾಗರ್ ಇಬ್ಬರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಣಕ್ಕಾಗಿ ಶುರುವಾದ ಒಂದು ಸಣ್ಣ ಜಗಳ ಒಂದು ಅಮೂಲ್ಯ ಜೀವವನ್ನು ಬಲಿ ತೆಗೆದುಕೊಂಡಿದೆ.

                                    