ಹೊಸದಿಗಂತ ವಿಜಯಪುರ:
ಜಿಲ್ಲೆಯ ಜನರ ದಶಕಗಳ ಬೇಡಿಕೆಯಾಗಿದ್ದ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕೊನೆಗೂ ವಿಘ್ನ ನಿವಾರಣೆಯಾಗಿದೆ. ಈ ಹಿಂದೆ ಘೋಷಿಸಲಾಗಿದ್ದ ಖಾಸಗಿ ಸಹಭಾಗಿತ್ವದ (PPP) ಮಾದರಿಯನ್ನು ಕೈಬಿಟ್ಟು, ಸರ್ಕಾರದಿಂದಲೇ ನೇರವಾಗಿ ಕಾಲೇಜು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಹತ್ವದ ಘೋಷಣೆ ಮಾಡಿದ್ದಾರೆ.
ಬುಧವಾರ ಹಾವೇರಿ ಜಿಲ್ಲೆಯಲ್ಲಿ ನೂತನ ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿಗಳು, ವೇದಿಕೆಯಲ್ಲಿದ್ದ ಸಚಿವ ಶಿವಾನಂದ ಪಾಟೀಲ ಅವರ ಮನವಿಗೆ ಸ್ಪಂದಿಸಿದರು. “ಶಿವಾನಂದ ಪಾಟೀಲ ಅವರೇ, ನಿಮ್ಮ ಜಿಲ್ಲೆಯ ಬೇಡಿಕೆಯಂತೆ ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಲಾಗುವುದು,” ಎಂದು ಭಾಷಣದ ಮಧ್ಯೆಯೇ ಪ್ರಕಟಿಸುವ ಮೂಲಕ ಜಿಲ್ಲೆಯ ಜನರಲ್ಲಿ ಹರ್ಷ ಮೂಡಿಸಿದರು.
ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಟ್ರಾಮಾ ಕೇರ್ ಸೆಂಟರ್, ತಾಯಿ-ಮಕ್ಕಳ ಆಸ್ಪತ್ರೆ ಸೇರಿದಂತೆ ಹತ್ತಾರು ಮೂಲಸೌಕರ್ಯಗಳನ್ನು ಕಲ್ಪಿಸಿದ್ದ ಶಿವಾನಂದ ಪಾಟೀಲರು, ಜಿಲ್ಲೆಗೆ ಖಾಸಗಿ ಸಹಭಾಗಿತ್ವದ ಕಾಲೇಜು ಬೇಡವೇ ಬೇಡ ಎಂಬ ಪಟ್ಟನ್ನು ಹಿಡಿದಿದ್ದರು. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಹಲವು ಬಾರಿ ಪತ್ರ ಬರೆದು, ಖಾಸಗಿ ಹಿತಾಸಕ್ತಿಗಿಂತ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸರ್ಕಾರಿ ಕಾಲೇಜೇ ಬೇಕೆಂದು ಒತ್ತಡ ಹೇರಿದ್ದರು.
ಕೇವಲ ರಾಜಕೀಯ ಸ್ತರದಲ್ಲಿ ಮಾತ್ರವಲ್ಲದೆ, ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ನೂರಕ್ಕೂ ಹೆಚ್ಚು ದಿನಗಳ ಕಾಲ ಪಕ್ಷಾತೀತವಾಗಿ ಬೃಹತ್ ಹೋರಾಟಗಳು ನಡೆದಿದ್ದವು. ಸಾರ್ವಜನಿಕರ ಈ ತೀವ್ರ ಹೋರಾಟ ಮತ್ತು ಸಚಿವರ ಪಟ್ಟು ಈಗ ಯಶಸ್ಸು ಕಂಡಿದೆ.
ಸರ್ಕಾರದ ಈ ನಿರ್ಧಾರದಿಂದಾಗಿ ಜಿಲ್ಲೆಯ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ಸುವರ್ಣಾವಕಾಶ ಲಭಿಸಲಿದೆ.

