ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬ್ಯಾಷ್ ಲೀಗ್ 2026ರ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಝಂ ಮತ್ತೊಮ್ಮೆ ವೈಫಲ್ಯ ಅನುಭವಿಸಿದ್ದಾರೆ.
ಗಬ್ಬಾ ಮೈದಾನದಲ್ಲಿ ನಡೆದ ಬ್ರಿಸ್ಬೇನ್ ಹೀಟ್ ವಿರುದ್ಧದ 40ನೇ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ಗೆಲುವು ಅನಿವಾರ್ಯವಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಬ್ರಿಸ್ಬೇನ್ ಹೀಟ್ ನೀಡಿದ್ದ 172 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಸಿಕ್ಸರ್ಸ್‌ಗೆ ಆರಂಭದಲ್ಲೇ ಆಘಾತ ಎದುರಾಯಿತು.
ಆರಂಭಿಕನಾಗಿ ಕಣಕ್ಕಿಳಿದ ಬಾಬರ್ ಆಝಂ, ಕೇವಲ 14.28ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ 7 ಎಸೆತಗಳಲ್ಲಿ 1 ರನ್ ಗಳಿಸಿ ಕ್ಸೇವಿಯರ್ ಬಾರ್ಟ್ಲೆಟ್‌ಗೆ ವಿಕೆಟ್ ಒಪ್ಪಿಸಿದರು. ಒಂದು ಕಡೆ ಸ್ಟೀವ್ ಸ್ಮಿತ್ ಅಬ್ಬರದ ಆಟವಾಡುತ್ತಿದ್ದರೆ, ಬಾಬರ್ ರನ್ ಗಳಿಸಲು ಪರದಾಡಿದ್ದು ತಂಡದ ಮೇಲೆ ಅನಗತ್ಯ ಒತ್ತಡಕ್ಕೆ ಕಾರಣವಾಯಿತು.
ಈ ಸೀಸನ್‌ನಲ್ಲಿ ಆಡಿರುವ 11 ಪಂದ್ಯಗಳಲ್ಲಿ ಬಾಬರ್ ಕೇವಲ 203 ರನ್ ಗಳಿಸಿದ್ದು, ಟಿ20 ಕ್ರಿಕೆಟ್‌ಗೆ ಸರಿಹೊಂದದ ಸ್ಟ್ರೈಕ್ ರೇಟ್ ಅವರ ವಿರುದ್ಧದ ಟೀಕೆಗೆ ಆಹಾರವಾಗಿದೆ.


