ಹೊಸದಿಗಂತ ವರದಿ ಚಿತ್ರದುರ್ಗ:
ಪ್ರತಿ ವರ್ಷದಂತೆ ಈ ಬಾರಿಯೂ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಪಟಾಕಿ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ನಗರದ ಅನೇಕ ಪಟಾಕಿ ಮಾರಾಟಗಾರರು ಇಲ್ಲಿ ನಿರ್ಮಿಸಿರುವ ಶೆಡ್‌ಗಳಲ್ಲಿ ಪಟಾಕಿ ದಾಸ್ತಾನು ಇಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಒಂದೆಡೆ ಬಿಟ್ಟು ಬಿಟ್ಟು ಬರುತ್ತಿರುವ ಮಳೆ. ಮತ್ತೊಂದೆಡೆ ಪಟಾಕಿ ಖರೀದಿಸುವ ಗ್ರಾಹಕರ ನಿರಾಸಕ್ತಿ ಇದರಿಂದಾಗಿ ನಿರೀಕ್ಷೆಯಂತೆ ಪಟಾಕಿ ವ್ಯಾಪಾರ ನಡೆಯುತ್ತಿಲ್ಲ. ಹಾಗಾಗಿ ಈ ಬಾರಿಯ ಬೆಳಕಿನ ಹಬ್ಬ ಪಟಾಕಿ ಮಾರಾಟಗಾರರಿಗೆ ಮಂಕಾಗಿದೆ.
ವರ್ಷದಿಂದ ವರ್ಷಕ್ಕೆ ಪಟಾಕಿ ಮಾರಾಟಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಪಟಾಕಿ ಖರೀದಿದಾರರ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂಬುದು ಪಟಾಕಿ ಮಾರಾಟಗಾರರ ಅಭಿಪ್ರಾಯ. ಕಳೆದ ವರ್ಷ 24 ಪಟಾಕಿ ವ್ಯಾಪಾರ ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಈ ಬಾರಿ 28 ಅಂಗಡಿಗಳನ್ನು ನಿರ್ಮಿಸಲಾಗಿದೆ. ಇದರಿಂದ ಮಾರಾಟದಲ್ಲಿ ತುಸು ಸ್ಪರ್ಧೆ ಹೆಚ್ಚಾದಂತಾಗಿದೆ. ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು. ಅಲ್ಲದೇ ಪರಿಸರ ಜಾಗೃತಿಯಿಂದ ಒಂದಷ್ಟು ಜನ ಜಾಗೃತರಾಗಿದ್ದು, ಪಟಾಕಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.
ಕಳೆದ ಭಾನುವಾರದಿಂದ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ಭಾನುವಾರ ನಿರಂತರ ಮಳೆ ಬಿದ್ದ ಕಾರಣ ಪಟಾಕಿ ಖರೀದಿಸಲು ಜನರು ಬರಲಿಲ್ಲ. ಅಲ್ಲದೇ ಅಂಗಡಿಗಳಿಗೆ ಪಟಾಕಿ ದಾಸ್ತಾನು ಬರುವಲ್ಲಿಯೂ ತಡವಾಯಿತು. ಸೋಮವಾರ ಕೊಂಚ ವ್ಯಾಪಾರ ಚೇತರಿಕೆ ಕಂಡರೂ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ. ಜನ ತಂಡೋಪ ತಂಡವಾಗಿ ಅಂಗಡಿಗೆ ಬರುತ್ತಾರೆ. ಆದರೆ ಖರೀದಿ ಪ್ರಮಾಣ ಮಾತ್ರ ಅಷ್ಟಕಷ್ಟೆ. ಹಾಗಾಗಿ ಹಾಕಿದ ಬಂಡವಾಳ ಕೈಸೇರಿದರೆ ಸಾಕು ಎನ್ನುವಂತಾಗಿದೆ ಎನ್ನುತ್ತಾರೆ ಪಟಾಕಿ ವ್ಯಾಪಾರಿ ಟಿ.ರಮೇಶ್.
ಪಟಾಕಿ ಮಾರಾಟಗಾರರಿಗೆ ಮಂಕಾದ ಬೆಳಕಿನ ಹಬ್ಬ: ಮಳೆಯಿಂದ ಹೊರಗೆ ಬಾರದ ಜನ
