February 28, 2026
Saturday, February 28, 2026
spot_img

ಸಾಲದ ಸುಳಿಗೆ ಸಿಲುಕಿ ಮೂರು ತಿಂಗಳ ಹಸುಗೂಸಿನೊಂದಿಗೆ ಬೀದಿಗೆ ಬಿದ್ದ ಕುಟುಂಬ!

ಹೊಸದಿಗಂತ ಬೆಳಗಾವಿ:

ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬ್ರೇಕ್ ಹಾಕಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರೂ, ಬೆಳಗಾವಿ ಜಿಲ್ಲೆಯಲ್ಲಿ ಫೈನಾನ್ಸ್ ಸಿಬ್ಬಂದಿಗಳ ದರ್ಪ ಮಿತಿಮೀರಿದೆ. ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಸಾಲ ವಸೂಲಾತಿ ಹೆಸರಿನಲ್ಲಿ ಖಾಸಗಿ ಫೈನಾನ್ಸ್ ಕಂಪನಿಯೊಂದು ನಡೆಸಿದ ಅಮಾನವೀಯ ಕೃತ್ಯಕ್ಕೆ ಇಡೀ ಕುಟುಂಬವೊಂದು ಬೀದಿಗೆ ಬಿದ್ದಿದೆ.

ಅಲಖನೂರ ಗ್ರಾಮದ ಹನುಮಂತ ಪಾಟೀಲ್ ಎಂಬುವವರ ತಂದೆ ಶ್ರೀಕಾಂತ್ ಪಾಟೀಲ್ ಅವರ ಹೃದಯ ಶಸ್ತ್ರಚಿಕಿತ್ಸೆಗಾಗಿ ಚಿಕ್ಕೋಡಿಯ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಕಂಪನಿಯಿಂದ ಸುಮಾರು 20 ಲಕ್ಷ ರೂ. ಸಾಲ ಪಡೆಯಲಾಗಿತ್ತು. ಕಳೆದ ವರ್ಷ ತಂದೆ ನಿಧನರಾದ ನಂತರ ಹಾಗೂ ಕುಟುಂಬದಲ್ಲಿ ಆರೋಗ್ಯ ಸಮಸ್ಯೆ ಎದುರಾದ ಕಾರಣ, ಕಳೆದ ಏಳು ತಿಂಗಳಿಂದ ಕಂತು ಪಾವತಿಸಲು ಸಾಧ್ಯವಾಗಿರಲಿಲ್ಲ. ಸುಮಾರು 7 ಲಕ್ಷ ರೂ. ಬಾಕಿ ಇದೆ ಎಂಬ ಕಾರಣಕ್ಕೆ ಬಂದ ಫೈನಾನ್ಸ್ ಸಿಬ್ಬಂದಿ, ಕನಿಷ್ಠ ಮಾನವೀಯತೆಯೂ ಇಲ್ಲದೆ ಮನೆಗೆ ಬೀಗ ಜಡಿದಿದ್ದಾರೆ.

ಮನೆಯಲ್ಲಿ ಕೇವಲ ಮೂರು ತಿಂಗಳ ಹಸುಗೂಸು ಮತ್ತು ಬಾಣಂತಿ ಇದ್ದರೂ ಲೆಕ್ಕಿಸದ ಸಿಬ್ಬಂದಿ, ಬಟ್ಟೆ-ಬರೆ ಅಥವಾ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲೂ ಅವಕಾಶ ನೀಡದೆ ಮನೆಯನ್ನು ಸೀಜ್ ಮಾಡಿದ್ದಾರೆ. ಪರಿಣಾಮವಾಗಿ, ಐವರು ಸದಸ್ಯರ ಕುಟುಂಬವು ತೀವ್ರ ಚಳಿಯಲ್ಲಿ ರಾತ್ರಿಯಿಡೀ ಬೀದಿಯಲ್ಲೇ ಕಳೆಯುವಂತಾಗಿದೆ. ಸೂಕ್ತ ಆಹಾರ ಮತ್ತು ಆಶ್ರಯವಿಲ್ಲದೆ 3 ತಿಂಗಳ ಮಗು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಪ್ರಸ್ತುತ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹನುಮಂತ ಪಾಟೀಲ್ ಅವರ ಪತ್ನಿ ಶ್ರೀದೇವಿ ಕಣ್ಣೀರಿಟ್ಟಿದ್ದಾರೆ.

ಫೈನಾನ್ಸ್ ಕಂಪನಿಯ ಈ ಗೂಂಡಾಗಿರಿ ಕಂಡು ಅಲಖನೂರ ಗ್ರಾಮಸ್ಥರು ಕೆಂಡಾಮಂಡಲವಾಗಿದ್ದಾರೆ. ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಬಡವರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಇಂತಹ ಕಂಪನಿಗಳ ವಿರುದ್ಧ ಕೂಡಲೇ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !