ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದ ಹೃದಯ ವಿದ್ರಾವಕ ಘಟನೆಯಲ್ಲಿ, ಪ್ರಾಣಿ ವಿನಿಮಯ ಯೋಜನೆ ಅಡಿಯಲ್ಲಿ ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ಗೆ ಸ್ಥಳಾಂತರಿಸಬೇಕಿದ್ದ ಹೆಣ್ಣು ಕಾಡೆಮ್ಮೆಯೊಂದು ಅಕಾಲಿಕ ಮರಣಪ್ಪಿದೆ. ಇದಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಏನಾಯ್ತು?
ಬನ್ನೇರುಘಟ್ಟದಿಂದ ಕಾಡೆಮ್ಮೆಯನ್ನು ಶಿಫ್ಟ್ ಮಾಡುವ ಪ್ರಕ್ರಿಯೆ ಆರಂಭವಾದಾಗ, ಅದನ್ನು ಹಿಡಿದು ಕ್ವಾರಂಟೈನ್ ಆವರಣಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಈ ವೇಳೆ, ಕಾಡೆಮ್ಮೆಯನ್ನು ಹಿಡಿಯಲು ಅರವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ದುರದೃಷ್ಟವಶಾತ್, ಅರವಳಿಕೆ ನೀಡಿದ ನಂತರ ಕಾಡೆಮ್ಮೆ ನಿರೀಕ್ಷೆಯಂತೆ ಚೇತರಿಸಿಕೊಳ್ಳಲಿಲ್ಲ. ಚಿಕಿತ್ಸೆ ಮತ್ತು ಹಾರೈಕೆಯ ನಡುವೆಯೂ ಅದು ಸಾವನ್ನಪ್ಪಿದೆ.
ನಿರ್ಲಕ್ಷ್ಯದ ಆರೋಪ!
ಕಾಡೆಮ್ಮೆಯನ್ನು ಸೆರೆಹಿಡಿಯುವ ಮತ್ತು ಸ್ಥಳಾಂತರಿಸುವ ಈ ಸೂಕ್ಷ್ಮ ಕಾರ್ಯಾಚರಣೆಯ ಸಮಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ ಮತ್ತು ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ. ಅವರ ಬೇಜವಾಬ್ದಾರಿಯೇ ಅಮಾಯಕ ಪ್ರಾಣಿಯ ಜೀವವನ್ನು ಬಲಿ ತೆಗೆದುಕೊಂಡಿದೆ ಎಂದು ಪ್ರಾಣಿಪ್ರಿಯರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ನಿರ್ವಹಣೆ ಮತ್ತು ಪ್ರಾಣಿ ಆರೋಗ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ.

