ಹೊಸದಿಗಂತ ಡಿಜಿಟಲ್ ಡೆಸ್ಕ್:
ತಂದೆ-ತಾಯಿ ಬೇರೆಯಾಗಿದ್ದಕ್ಕೆ ಮಾನಸಿಕ ಒತ್ತಡಕ್ಕೆ ಒಳಗಾಗಿ 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆ ಕುಟುಂಬದ ಭಿನ್ನಾಭಿಪ್ರಾಯಗಳು ಮಕ್ಕಳ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತಿವೆ ಅನ್ನೋದನ್ನು ಮತ್ತೆ ಸಾಬೀತು ಪಡಿಸಿದೆ.
ಮೃತ ಬಾಲಕಿಯನ್ನು ಲೇಖನಾ (17) ಎಂದು ಗುರುತಿಸಲಾಗಿದೆ.
10ನೇ ತರಗತಿಯಲ್ಲಿ ಅನುತ್ತೀರ್ಣಳಾದ ಬಳಿಕ ಮನೆಯಲ್ಲೇ ಇದ್ದ ಲೇಖನಾಳ ತಂದೆ-ತಾಯಿ ಕೌಟುಂಬಿಕ ಕಲಹದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ತಂದೆ ಬೇರೆಡೆ ವಾಸವಾಗಿದ್ದರೆ, ಲೇಖನಾ ತಾಯಿಯ ಜೊತೆಗೆ ನೆಲೆಸಿದ್ದಳು.
ಪೊಲೀಸರ ಮಾಹಿತಿ ಪ್ರಕಾರ, “ನನಗೆ ತಂದೆ-ತಾಯಿಯ ಪ್ರೀತಿ ಸಿಗುತ್ತಿಲ್ಲ. ನಾನು ಒಂಟಿಯಾಗಿರುವ ಭಾವನೆ ಕಾಡುತ್ತಿದೆ. ನನ್ನ ಸಾವಿಗೆ ನಾನೇ ಕಾರಣ” ಎಂದು ಉಲ್ಲೇಖಿಸಿರುವ ಡೆತ್ ನೋಟ್ ಬರೆದು, ಬುಧವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆಯ ಬಳಿಕ ಬಾಲಕಿಯ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಪ್ರಕರಣ ಸಂಬಂಧ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

