January20, 2026
Tuesday, January 20, 2026
spot_img

ಹಾಸನಾಂಬೆ ಉತ್ಸವಕ್ಕೆ ಅದ್ದೂರಿ ತೆರೆ:ಮುಂದಿನ ವರ್ಷ ದೇವಿ ದರುಶನಕ್ಕೆ ಮುಹೂರ್ತ ಫಿಕ್ಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವರ್ಷಕ್ಕೊಮ್ಮೆ ಮಾತ್ರ ದರುಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ಬಂದ್ ಆಗಿದೆ.

ಪ್ರಧಾನ ಅರ್ಚಕ ನಾಗರಾಜ್ ನೇತೃತ್ವದಲ್ಲಿ ನಡೆದ ಅಂತಿಮ ಪೂಜೆ ನಡೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರ ಸಮ್ಮುಖದಲ್ಲಿ ಗರ್ಭಗುಡಿಗೆ ಅರ್ಚಕರು ಬೀಗ ಹಾಕಿದರು. ಈ ಮೂಲಕ 15 ದಿನಗಳ ಕಾಲ ನಡೆದ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿದೆ.

ಅ.9ರಿಂದ ಆರಂಭವಾಗಿ ಅ.23ರವರೆಗೆ ದರುಶನ ಭಾಗ್ಯ ಕರುಣಿಸಿದ ಹಾಸನಾಂಬೆ ಇಂದು ಮಧ್ಯಾಹ್ನ 1:06ಕ್ಕೆ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲನ್ನು ಮುಚ್ಚಲಾಯಿತು. ಈ ವೇಳೆ ಪಂಜಿನ ಪೂಜೆ, ಮಂಗಳವಾದ್ಯ ಮೊಳಗಿತು.

ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯ ಸರ್ಕಾರದ ಸಚಿವರು, ಶಾಸಕರು, ನಟ, ನಟಿಯರು ವಿವಿಧ ಕ್ಷೇತ್ರದ ಗಣ್ಯರು ದೇವಿಯ ದರುಶನ ಪಡೆದು ಪುನೀತರಾಗಿದ್ದಾರೆ. ಈ ಬಾರಿಯ 13 ದಿನಗಳ ಸಾರ್ವಜನಿಕ ದರುಶನದಲ್ಲಿ ವಿವಿಐಪಿ ಪಾಸ್‌ಗಳ ರದ್ದು ಮಾಡಿ ಗೋಲ್ಡ್ ಪಾಸ್, ಪ್ರೋಟೋಕಾಲ್‌ಗೆ ಸಮಯ ನಿಗದಿ ಮಾಡಿದ್ದರಿಂದ ಸಾರ್ವಜನಿಕರಿಗೆ ಸುಗಮವಾಗಿ ಹಾಸನಾಂಬ ದೇವಿಯ ದರುಶನ ಆಗಿದೆ.

ಬುಧವಾರ ಸಂಜೆಯವರೆಗೂ 26.13 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರುಶನ ಪಡೆದಿದ್ದಾರೆ. ಶೀಘ್ರ ದರುಶನದ ಟಿಕೆಟ್ ಮಾರಾಟದಿಂದ 21.82 ಕೋಟಿ ರೂ. ಹಣ ಸಂಗ್ರಹವಾಗಿದೆ. ಉಳಿದಂತೆ ಹುಂಡಿ ಎಣಿಕೆ ಕಾರ್ಯ ಬಾಕಿಯಿದ್ದು, 25 ಕೋಟಿ ತಲುಪಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಮುಂದಿನ ವರ್ಷದ ಹಾಸನಾಂಬೆ ಉತ್ಸವಕ್ಕೆ ದಿನಾಂಕ ನಿಗದಿ:
ಈ ಬಾರಿಯ ಹಾಸನಾಂಬೆ ದರ್ಶನೋತ್ಸವ ಇತಿಹಾಸ ನಿರ್ಮಸಿ, ದಾಖಲೆ ಬರೆಯುವ ಜೊತೆಗೆ ಅತ್ಯಂತ ಯಶಸ್ವಿ ಮತ್ತು ಅಚ್ಚುಕಟ್ಟಾಗಿ ನಡೆಯಿತು. ಮುಂದಿನ ವರ್ಷದ ಹಾಸನಾಂಬೆ ಉತ್ಸವ ದಿನಾಂಕವನ್ನು ಪಂಚಾಂಗದ ಪ್ರಕಾರ, ನಿಗದಿ ಮಾಡಲಾಗಿದೆ. 2026ರ ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ನಡೆಯಲಿದೆ. ಒಟ್ಟು 14 ದಿನ ಗರ್ಭಗುಡಿ ತೆರೆದಿರಲಿದ್ದು, ಈ ಪೈಕಿ 12 ದಿನ ಭಕ್ತರ ದರುಶನಕ್ಕೆ ಅವಕಾಶ ನೀಡಲಾಗುತ್ತದೆ. ಒಟ್ಟಿನಲ್ಲಿ ಹಾಸನಾಂಬೆಯ ಈ ಬಾರಿಯ ಉತ್ಸವಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ.

Must Read