February 3, 2026
Tuesday, February 3, 2026
spot_img

ಟಿ20 ವಿಶ್ವಕಪ್ ಸಮರಕ್ಕೆ ಅದ್ಧೂರಿ ಮುನ್ನುಡಿ: ಲಂಕಾ ಎ ತಂಡವನ್ನು ಮಣಿಸಿದ ಓಮನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಟಿ20 ವಿಶ್ವಕಪ್‌ಗೆ ಕೌಂಟ್‌ಡೌನ್ ಶುರುವಾಗಿದ್ದು, ಫೆಬ್ರವರಿ 7 ರಿಂದ ಕ್ರಿಕೆಟ್ ಹಬ್ಬ ಆರಂಭವಾಗಲಿದೆ. ಆದರೆ, ಈ ಮಹಾಸಮರಕ್ಕೆ ಮುನ್ನವೇ ಅಭ್ಯಾಸ ಪಂದ್ಯಗಳಲ್ಲಿ ಅಚ್ಚರಿಯ ಫಲಿತಾಂಶಗಳು ಹೊರಬೀಳುತ್ತಿವೆ. ಇಂದು ನಡೆದ ರೋಚಕ ಅಭ್ಯಾಸ ಪಂದ್ಯದಲ್ಲಿ ಕ್ರಿಕೆಟ್ ಲೋಕದ ಕಿರಿಯ ತಂಡ ಎನಿಸಿಕೊಂಡಿರುವ ಓಮನ್, ಮಾಜಿ ಚಾಂಪಿಯನ್ಸ್ ಶ್ರೀಲಂಕಾ (ಎ ತಂಡ) ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿ ಎಲ್ಲರ ಗಮನ ಸೆಳೆದಿದೆ.

ಭಾರತದೊಂದಿಗೆ ಜಂಟಿಯಾಗಿ ವಿಶ್ವಕಪ್ ಆಯೋಜಿಸುತ್ತಿರುವ ಶ್ರೀಲಂಕಾ, ತನ್ನ ಮೊದಲ ಅಭ್ಯಾಸ ಪಂದ್ಯಕ್ಕೆ ‘ಎ’ ತಂಡವನ್ನು ಕಣಕ್ಕಿಳಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ಪಡೆಯನ್ನು ಓಮನ್ ಬೌಲರ್‌ಗಳು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಲಂಕಾ ಪರ ವನುಜಾ ಸಹನ್ (29 ರನ್) ಮಾತ್ರ ಅಲ್ಪ ಹೋರಾಟ ತೋರಿದರು. ಪರಿಣಾಮ ಶ್ರೀಲಂಕಾ ಎ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 145 ರನ್ ಗಳಿಸಲಷ್ಟೇ ಶಕ್ತವಾಯಿತು. ಓಮನ್ ಪರ ಶಾ ಫೈಸಲ್ ಮತ್ತು ಜೇ ಒಡೆದ್ರಾ ತಲಾ ಎರಡು ವಿಕೆಟ್ ಕಿತ್ತು ಲಂಕೆಗೆ ಕಡಿವಾಣ ಹಾಕಿದರು.

ಇದನ್ನೂ ಓದಿ:

146 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಓಮನ್ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮೊರೆಹೋಯಿತು. 44 ವರ್ಷದ ಹಿರಿಯ ಆಟಗಾರ ಆಮಿರ್ ಕಲೀಮ್ ಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 47 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 80 ರನ್ ಚಚ್ಚಿದ ಕಲೀಮ್, ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಇವರಿಗೆ ಸಾಥ್ ನೀಡಿದ ವಿನಾಯಕ್ ಶುಕ್ಲಾ (ಅಜೇಯ 39 ರನ್) ತಂಡವನ್ನು 18 ಓವರ್‌ಗಳಲ್ಲೇ ಗೆಲುವಿನ ದಡ ಸೇರಿಸಿದರು.

ಕುತೂಹಲಕಾರಿ ವಿಷಯವೆಂದರೆ, ಇದಕ್ಕೂ ಮೊದಲು ಭಾರತ ತಂಡವು ಅಮೆರಿಕ ವಿರುದ್ಧ ತನ್ನ ‘ಎ’ ತಂಡವನ್ನು ಕಣಕ್ಕಿಳಿಸಿ ಗೆಲುವು ಸಾಧಿಸಿತ್ತು. ಆದರೆ, ತವರಿನಲ್ಲೇ ಆಡುತ್ತಿದ್ದ ಶ್ರೀಲಂಕಾ ಎ ತಂಡವು ಓಮನ್ ವಿರುದ್ಧ ಸೋಲುವ ಮೂಲಕ ವಿಶ್ವಕಪ್‌ಗೂ ಮುನ್ನ ತುಸು ಹಿನ್ನಡೆ ಅನುಭವಿಸಿದೆ. ಸೀಮಿತ ಸೌಲಭ್ಯಗಳ ನಡುವೆಯೂ ಓಮನ್ ತೋರಿದ ಈ ಪ್ರದರ್ಶನ ಮುಂಬರುವ ವಿಶ್ವಕಪ್‌ನಲ್ಲಿ ದೊಡ್ಡ ತಂಡಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !