Saturday, October 11, 2025

ಗುಮ್ಮಟ ನಗರಿಯಲ್ಲಿ ಆರ್‌ಎಸ್‌ಎಸ್‌ನ ಶತಾಬ್ದಿ ವರ್ಷ ಅದ್ಧೂರಿ ಪಥಸಂಚಲನ

ಹೊಸದಿಗಂತ ವರದಿ, ವಿಜಯಪುರ:

ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಶತಾಬ್ದಿ ಹಾಗೂ ವಿಜಯದಶಮಿ ನಿಮಿತ್ತ ಗುಮ್ಮಟ ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ವತಿಯಿಂದ ಗಣವೇಷಧಾರಿಗಳ ಶಿಸ್ತುಬದ್ಧ ಆಕರ್ಷಕ ಪಥಸಂಚಲನ ಶನಿವಾರ ಅದ್ಧೂರಿಯಾಗಿ ನಡೆಯಿತು.

ಶುಭ್ರ ಬಿಳಿ ವರ್ಣದ ಅಂಗಿ, ಖಾಕಿ ಬಣ್ಣದ ಪ್ಯಾಂಟ್, ತಲೆ ಮೇಲೆ ಟೊಪ್ಪಿಗೆ ಹೀಗೆ ಆರ್‌ಎಸ್‌ಎಸ್ ಸಾಂಪ್ರದಾಯಿಕ ಉಡುಗೆ ತೊಟ್ಟ ಸಾವಿರಾರು ಸ್ವಯಂಸೇವಕರು ಶಿಸ್ತುಬದ್ದವಾಗಿ ಹೆಜ್ಜೆ ಹಾಕುತ್ತಿರುವುದು ನೋಡುಗರ ಮನಸೆಳೆಯಿತು.

ನಗರದಲ್ಲಿ ಪಥ ಸಂಚಲನ ಸಾಗುವ ಮಾರ್ಗದಲ್ಲಿ ಬೃಹತ್ ಕಮಾನು ನಿರ್ಮಿಸಲಾಗಿದ್ದು, ಬಣ್ಣ ಬಣ್ಣದ ಚಿತ್ತಾರದ ರಂಗೋಲಿ ಬಿಡಿಸಿ ಸಾರ್ವಜನಿಕರು ಸ್ವಾಗತಕೋರಿ, ಗಣವೇಷಧಾರಿಗಳ ಮೇಲೆ ಪುಷ್ಪವೃಷ್ಟಿಗೈದು, ಭಾರತ ಮಾತಾಕೀ ಜೈ ಎನ್ನುವ ಜಯಘೋಷ ಕೂಗಿ ದೇಶಪ್ರೇಮ ಮೆರೆದರು.

ಸುಶ್ರಾವ್ಯವಾದ ಡ್ರಮ್ ಮತ್ತಿತರ ವಾದ್ಯಗಳಿಂದ ಮೊಳಗಿದ ಹಿಮ್ಮೇಳ ಪಥ ಸಂಚಲನಕ್ಕೆ ಮೆರಗು ನೀಡಿತು.

ಇಲ್ಲಿನ ಬಾಬು ಜಗಜೀವನರಾಮ್ ವೃತ್ತದ ಮೂಲಕ ಆರಂಭಗೊಂಡ ಪಥ ಸಂಚಲನ ವಾಟರ್ ಟ್ಯಾಂಕ್ ಬಳಿ ದ್ವಿಮಾರ್ಗವಾಗಿ
ಸಂಚರಿಸಿ, ಮತ್ತೆ ನಗರದ ಗಾಂಧಿ ವೃತ್ತದ ಬಳಿ ಸಂಗಮಗೊಂಡು, ಕಲಾ ಭವನ, ರಾಮ ಮಂದಿರ ಗುಡಿ, ಡಾ. ಹೆಗಡೇವಾರ ವೃತ್ತ, ಸಿದ್ಧೇಶ್ವರ ದೇವಸ್ಥಾನ ಮಾರ್ಗವಾಗಿ ಬಸವೇಶ್ವರ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ದರಬಾರ ಹೈಸ್ಕೂಲ್ ಮೈದಾನಕ್ಕೆ ತೆರಳಿ ಸಂಪನ್ನಗೊಂಡು, ಬಹಿರಂಗ ಸಭೆಯಾಗಿ ಮಾರ್ಪಟ್ಟಿತು.

ಗಣವೇಷಧಾರಿಗಳ ಪಥಸಂಚಲನದುದ್ದಕ್ಕೂ ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಂಡಿತ್ತು.

error: Content is protected !!