ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವರಿಗೆ ಗಂಡು ಮಗುವೇ ಬೇಕು ಎನ್ನುವ ಆಸೆ ಇರುತ್ತದೆ. ಮೊದಲ ಎರಡು ಮಗು ಹೆಣ್ಣಾದರೂ ಇನ್ನೊಂದು ಗಂಡಾಗುತ್ತದೆ ಎನ್ನುವ ಆಸೆಯಲ್ಲಿ ಇರುತ್ತಾರೆ. ಮೂರನೇ ಮಗುವೂ ಹೆಣ್ಣಾದರೆ ಅಲ್ಲಿಗೆ ಸಾಕು ಎಂದು ಸುಮ್ಮನಾಗಿಬಿಡುತ್ತಾರೆ.
ಆದರೆ ಇಲ್ಲೊಂದು ದಂಪತಿ ಗಂಡು ಮಗು ಬೇಕೇಬೇಕು ಎಂದು ಹತ್ತು ಹೆಣ್ಣುಮಕ್ಕಳಿಗೆ ಜನ್ಮನೀಡಿದ್ದಾರೆ. ಇದೀಗ ಹನ್ನೊಂದನೇ ಮಗು ಗಂಡಾಗಿದ್ದು, ದಂಪತಿಯ ಖುಷಿಗೆ ಪಾರವೇ ಇಲ್ಲದಂತಾಗಿದೆ.
ಈ ದಂಪತಿಗೆ ಮದುವೆಯಾಗಿ 19 ವರ್ಷವಾಗಿದೆ. 10 ಮಂದಿ ಹೆಣ್ಣು ಮಕ್ಕಳಿದ್ದಾರೆ. ಆದರೆ, ಇವರಿಗೆ ಒಂದು ಗಂಡು ಮಗುವಿನ ಆಸೆ. ಕೊನೆಗೂ ಇದೀಗ ಗಂಡು ಮಗು ಜನಿಸಿದೆ. ಕೂಲಿ ಕೆಲಸ ಮಾಡುವ ಪತಿ ಮತ್ತು ಪತ್ನಿ (37 ವರ್ಷ) ಈಚೆಗೆ ಹರಿಯಾಣದ ಆಸ್ಪತ್ರೆಯಲ್ಲಿ ತಮ್ಮ ಹನ್ನೊಂದನೇ ಮಗುವನ್ನು ಬರಮಾಡಿಕೊಂಡರು.
ನಮಗೆ ಒಂದು ಗಂಡು ಮಗು ಬೇಕೆಂಬ ಆಸೆ ಇತ್ತು. ನನ್ನ ಕೆಲವು ಹಿರಿಯ ಹೆಣ್ಣುಮಕ್ಕಳೂ ಸಹ ನಮಗೊಬ್ಬ ಸಹೋದರ ಬೇಕೆನ್ನುತ್ತಿದ್ದರು. ಇದು ನನ್ನ ಹನ್ನೊಂದನೇ ಮಗು. ನನಗೆ ಈಗಾಗಲೇ ಹತ್ತು ಹೆಣ್ಣು ಮಕ್ಕಳಿದ್ದಾರೆ ಎಂದು ಪತಿ ಸಂಜಯ್ ಕುಮಾರ್ ಹೇಳಿದರು. 2007ರಲ್ಲಿ ನಮ್ಮ ವಿವಾಹವಾಯಿತು. ನಮ್ಮ ಬಹುತೇಕ ಹೆಣ್ಣುಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಹಿರಿಮಗಳು 12ನೇ ತರಗತಿಯಲ್ಲಿ ಓದುತ್ತಿದ್ದಾಳೆ. ನನಗೆ ಬರುವ ಕಡಿಮೆ ಸಂಬಳದಲ್ಲಿ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದ್ದೇನೆ. ಏನೇ ಆದರೂ ಅದು ದೇವರ ಇಚ್ಛೆ. ನಾನು ಖುಷಿಯಾಗಿದ್ದೇನೆ ಎಂದರು.

