ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ರಂಗದ ಜನಪ್ರಿಯ ಕಲಾವಿದ ಹಾಗೂ ಧಾರವಾಡ ರಂಗಾಯಣದ ನಿರ್ದೇಶಕ ರಾಜು ತಾಳಿಕೋಟೆ ಅವರ ಅಕಾಲಿಕ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ತಾಳಿಕೋಟೆ ಅವರ ಸಾವು ಕನ್ನಡ ಕಲಾ ಲೋಕಕ್ಕೆ ಆದ ಬಹುದೊಡ್ಡ ನಷ್ಟ ಎಂದು ಸಚಿವರು ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ತಂಗಡಗಿ, “ಸದ್ಯ ಧಾರವಾಡ ರಂಗಾಯಣದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜು ತಾಳಿಕೋಟೆ ಅವರು ನನ್ನೊಂದಿಗೆ ಅತ್ಯಂತ ಆತ್ಮೀಯ ಒಡನಾಟ ಇರಿಸಿಕೊಂಡಿದ್ದರು. ಅವರು ರಂಗಾಯಣವನ್ನು ಹೊಸ ದೃಷ್ಟಿಕೋನದೊಂದಿಗೆ ಕಟ್ಟುತ್ತಾರೆಂಬ ಭರವಸೆ ಇತ್ತು. ಅವರ ಸಾವು ಈ ಸಂಸ್ಥೆಗೆ ತುಂಬಲಾರದ ನಷ್ಟ ಉಂಟುಮಾಡಿದೆ” ಎಂದಿದ್ದಾರೆ.
ತಮ್ಮದೇ ಆದ ‘ಖಾಸ್ಗತೇಶ್ವರ ನಾಟಕ ಮಂಡಳಿ’ ಕಂಪನಿ ಮೂಲಕ ಅನೇಕ ಜನಪ್ರಿಯ ನಾಟಕಗಳನ್ನು ಪ್ರದರ್ಶಿಸಿದ್ದ ರಾಜು ತಾಳಿಕೋಟೆ, ಕನ್ನಡ ಚಿತ್ರರಂಗದಲ್ಲಿ ‘ಪಂಚರಂಗಿ’ ಮತ್ತು ‘ಮನಸಾರೆ’ ಚಲನಚಿತ್ರಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು.
ರಿಯಾಲಿಟಿ ಶೋ ಬಿಗ್‌ಬಾಸ್‌ನಲ್ಲಿ ಭಾಗವಹಿಸುವ ಮೂಲಕ ಮನೆ ಮಾತಾಗಿದ್ದ ತಾಳಿಕೋಟೆ, ಒಬ್ಬ ಉತ್ತಮ ನಟನ ಜೊತೆಗೆ ಒಳ್ಳೆಯ ವ್ಯಕ್ತಿಯೂ ಆಗಿದ್ದರು ಎಂದು ಸಚಿವರು ಸ್ಮರಿಸಿದ್ದಾರೆ. “ಭಗವಂತ ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲಿ. ಅವರ ಅಗಲಿಕೆ ಕನ್ನಡ ರಂಗಭೂಮಿಗೆ ಆದ ಬಹುದೊಡ್ಡ ನಷ್ಟ. ಅದನ್ನು ಭರಿಸುವ ಶಕ್ತಿ ಅವರ ಅಭಿಮಾನಿಗಳಿಗೆ ಸಿಗಲಿ” ಎಂದು ಸಚಿವ ಶಿವರಾಜ ತಂಗಡಗಿ ಅವರು ಪ್ರಾರ್ಥಿಸಿದ್ದಾರೆ.