ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಎಂದಾಕ್ಷಣ ನೆನಪಾಗುವುದು ವಿಪರೀತ ಟ್ರಾಫಿಕ್. ಈ ವಾಹನ ದಟ್ಟಣೆಯು ನಗರದ ಪಾಲಿಗೆ ನಿತ್ಯದ ಕಥೆಯಾಗಿದ್ದು, ಹಲವು ಬಾರಿ ಇದು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ. ಆದರೆ, ಈಗ ಹೊರಬಿದ್ದಿರುವ ಅಂಕಿ-ಅಂಶಗಳು ಮತ್ತಷ್ಟು ಆತಂಕ ಮೂಡಿಸಿವೆ. ಇದೇ ಪರಿಸ್ಥಿತಿ ಮುಂದುವರಿದರೆ, ಬೆಂಗಳೂರಿನ ಸಂಚಾರ ವ್ಯವಸ್ಥೆ ಎಲ್ಲಿಗೆ ತಲುಪಬಹುದು ಎಂಬ ಪ್ರಶ್ನೆ ಎದ್ದಿದೆ.
ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಖರೀದಿ ನಿಯಂತ್ರಣ ಮೀರಿ ಹೆಚ್ಚಾಗಿದೆ. ದಾಖಲೆ ಪ್ರಮಾಣದಲ್ಲಿ ವಾಹನಗಳು ರಸ್ತೆಗಿಳಿಯುತ್ತಿರುವುದು ಸ್ಪಷ್ಟವಾಗಿದೆ.
2024ರ ಏಪ್ರಿಲ್‌ನಿಂದ ಅಕ್ಟೋಬರ್ ಅಂತ್ಯದವರೆಗೆ, ಬೆಂಗಳೂರಿನಲ್ಲಿ ಬರೋಬ್ಬರಿ 4 ಲಕ್ಷ ಖಾಸಗಿ ವಾಹನಗಳು ಹೊಸದಾಗಿ ನೋಂದಣಿಯಾಗಿವೆ. ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ, ನೋಂದಣಿಯಲ್ಲಿ ಶೇಕಡಾ 10% ರಷ್ಟು ಏರಿಕೆ ಕಂಡಿದೆ.
ಖಾಸಗಿ ವಾಹನಗಳ ಪೈಕಿ ಅತಿ ಹೆಚ್ಚು ನೋಂದಣಿಯಾಗಿರುವುದು ದ್ವಿಚಕ್ರ ವಾಹನಗಳು, ನಂತರದ ಸ್ಥಾನದಲ್ಲಿ ಕಾರುಗಳಿವೆ. 2025ರ ಡಿಸೆಂಬರ್ ವೇಳೆಗೆ ಬೆಂಗಳೂರು ನಗರವೊಂದರಲ್ಲಿಯೇ 1.28 ಕೋಟಿ ಖಾಸಗಿ ವಾಹನಗಳು ನೋಂದಣಿಯಾಗಿವೆ.
ರಾಜ್ಯದ ಒಟ್ಟು ಖಾಸಗಿ ವಾಹನಗಳ ಸಂಖ್ಯೆ ಸುಮಾರು 3.6 ಕೋಟಿ ಇದ್ದರೆ, ಅದರಲ್ಲಿ ಬೃಹತ್ ಪ್ರಮಾಣದ, ಅಂದರೆ 1.28 ಕೋಟಿ ವಾಹನಗಳು ಬೆಂಗಳೂರು ನಗರಕ್ಕೆ ಸೇರಿವೆ. ಇದರ ಜೊತೆಗೆ, ಅಕ್ಕಪಕ್ಕದ ಜಿಲ್ಲೆಗಳು ಮತ್ತು ಹೊರರಾಜ್ಯಗಳಿಂದ ಬರುವ ವಾಹನಗಳನ್ನು ಸೇರಿಸಿದರೆ, ನಗರದಲ್ಲಿ ಸುಮಾರು 1.5 ಕೋಟಿ ವಾಹನಗಳು ಸಂಚರಿಸುತ್ತಿವೆ ಎಂದು ಅಂದಾಜಿಸಲಾಗಿದೆ.
ಸಮೂಹ ಸಾರಿಗೆಯ ಬದಲಿಗೆ ಖಾಸಗಿ ವಾಹನಗಳ ಬಳಕೆಗೆ ಜನರು ಹೆಚ್ಚು ಒಲವು ತೋರುತ್ತಿರುವುದು ಟ್ರಾಫಿಕ್ ದಟ್ಟಣೆಗೆ ಮುಖ್ಯ ಕಾರಣವಾಗಿದೆ.

