ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಕ್ರಾಂತಿ ಹಬ್ಬದ ಬಳಿಕ ರಾಜ್ಯ ರಾಜಕಾರಣದಲ್ಲೂ ಬದಲಾವಣೆಯ ಗಾಳಿ ಬೀಸಲಿದೆ, ಮುಖ್ಯಮಂತ್ರಿ ಕುರ್ಚಿ ಗೊಂದಲಕ್ಕೆ ಹೈಕಮಾಂಡ್ ತೆರೆ ಎಳೆಯಲಿದೆ ಎಂದು ನಂಬಿದ್ದ ಕೈ ನಾಯಕರಿಗೆ ಈಗ ದೆಹಲಿ ದೊರೆಗಳು ಅಚ್ಚರಿಯ ಸಂದೇಶ ರವಾನಿಸಿದ್ದಾರೆ. ಡಿ ಕೆ ಶಿವಕುಮಾರ್ ಅವರನ್ನು ಅಸ್ಸಾಂ ರಾಜ್ಯದ ಕಾಂಗ್ರೆಸ್ ಚುನಾವಣಾ ಹಿರಿಯ ವೀಕ್ಷಕರನ್ನಾಗಿ ನೇಮಕ ಮಾಡುವ ಮೂಲಕ, ಸದ್ಯಕ್ಕೆ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂಬ ಪರೋಕ್ಷ ಸುಳಿವನ್ನು ಎಐಸಿಸಿ ನೀಡಿದೆ.
ಸಾಮಾನ್ಯವಾಗಿ ಉಪಮುಖ್ಯಮಂತ್ರಿ ಸ್ಥಾನದಲ್ಲಿರುವವರನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಿಸುವುದು ಅಪರೂಪ. ಆದರೆ, ಡಿಕೆ ಶಿವಕುಮಾರ್ ಅವರಿಗೆ ಅಸ್ಸಾಂ ಹೊಣೆಗಾರಿಕೆ ನೀಡಿರುವುದು ಹಲವು ರಾಜಕೀಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಮಾರ್ಚ್‌ನಿಂದ ಮೇ ತಿಂಗಳವರೆಗೆ ನಡೆಯಲಿರುವ ಪಂಚರಾಜ್ಯ ಚುನಾವಣೆಗಳಲ್ಲಿ ಡಿಕೆಶಿ ಬ್ಯುಸಿಯಾಗಲಿದ್ದಾರೆ. ಅಸ್ಸಾಂನಲ್ಲಿ ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಮತ್ತು ಸರ್ಕಾರ ರಚನೆಯ ಪ್ರಕ್ರಿಯೆ ಮುಗಿಯುವವರೆಗೆ ಕನಿಷ್ಠ 45 ದಿನಗಳ ಕಾಲ ಅವರು ಅಲ್ಲಿನ ರಾಜಕೀಯದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ.
ಒಂದು ವೇಳೆ ಸಂಕ್ರಾಂತಿ ಬಳಿಕ ಡಿಕೆಶಿ ಮುಖ್ಯಮಂತ್ರಿಯಾಗುವುದಿದ್ದರೆ, ಅವರಿಗೆ ಹೊರರಾಜ್ಯದ ಹೊಣೆ ನೀಡುತ್ತಿರಲಿಲ್ಲ. ಸಿಎಂ ಜವಾಬ್ದಾರಿಯ ನಡುವೆ ಮತ್ತೊಂದು ರಾಜ್ಯದ ಚುನಾವಣಾ ಉಸ್ತುವಾರಿ ನಿಭಾಯಿಸುವುದು ಕಷ್ಟಕರ. ಹಾಗಾಗಿ, ಏಪ್ರಿಲ್-ಮೇ ತಿಂಗಳವರೆಗೆ ರಾಜ್ಯದಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂಬುದು ಈ ನೇಮಕಾತಿಯ ಒಳಾರ್ಥ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ, ಸಂಕ್ರಾಂತಿ ನಂತರ ರಾಜ್ಯದಲ್ಲಿ ಮಹತ್ವದ ಬದಲಾವಣೆ ನಿರೀಕ್ಷೆಯಲ್ಲಿದ್ದ ಬೆಂಬಲಿಗರಿಗೆ ಈ ಬೆಳವಣಿಗೆ ತುಸು ನಿರಾಸೆ ಮೂಡಿಸಿದರೂ, ಹೈಕಮಾಂಡ್ ಮಾತ್ರ “ಸದ್ಯಕ್ಕೆ ಕುರ್ಚಿ ಖಾಲಿ ಇಲ್ಲ” ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದಂತಿದೆ.

