ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ಇಂದು ಅತ್ಯಂತ ಹೆಮ್ಮೆಯ ದಿನ. ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶವು ಹಿಂದೆಂದೂ ಕಾಣದ ರೀತಿಯಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ದಾಖಲೆ ನಿರ್ಮಿಸಿದೆ. ಒಟ್ಟು ಶೇ. 86.48ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ರಾಜ್ಯವು ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಸಂತಸ ಹಂಚಿಕೊಂಡ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, “ಪರೀಕ್ಷೆ ಬರೆದ 6,32,200 ವಿದ್ಯಾರ್ಥಿಗಳಲ್ಲಿ 5,46,698 ಮಕ್ಕಳು ತೇರ್ಗಡೆಯಾಗಿದ್ದಾರೆ. ಇದು ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲಾದ ಗರಿಷ್ಠ ಫಲಿತಾಂಶ,” ಎಂದು ತಿಳಿಸಿದರು.
ಪ್ರತಿ ವರ್ಷದಂತೆ ಈ ಬಾರಿಯೂ ಹೆಣ್ಣುಮಕ್ಕಳೇ ಮುಂಚೂಣಿಯಲ್ಲಿದ್ದಾರೆ.
ಬಾಲಕಿಯರು: ಶೇ. 88.70 (3,13,770 ವಿದ್ಯಾರ್ಥಿನಿಯರು)
ಬಾಲಕರು: ಶೇ. 83.65 (2,32,928 ವಿದ್ಯಾರ್ಥಿಗಳು)
ವಿಭಾಗವಾರು ಸಾಧನೆ:
ವಿಜ್ಞಾನ ವಿಭಾಗ: 2,66,071 ವಿದ್ಯಾರ್ಥಿಗಳು (ಶೇ. 86.48)
ವಾಣಿಜ್ಯ ವಿಭಾಗ: 1,82,317 ವಿದ್ಯಾರ್ಥಿಗಳು (ಶೇ. 88.04)
ಕಲಾ ವಿಭಾಗ: 98,310 ವಿದ್ಯಾರ್ಥಿಗಳು (ಶೇ. 72.86)
ವಿಶೇಷವೆಂದರೆ, ನಗರ ಪ್ರದೇಶಕ್ಕಿಂತ (ಶೇ. 85.95) ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ (ಶೇ. 87.62) ಹೆಚ್ಚು ಸಾಧನೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಶ್ರೇಣಿವಾರು ವಿವರ:
ಉನ್ನತ ಶ್ರೇಣಿ: 1,70,529 ಮಕ್ಕಳು
ಪ್ರಥಮ ದರ್ಜೆ: 2,95,385 ಮಕ್ಕಳು
ದ್ವಿತೀಯ ದರ್ಜೆ: 63,957 ಮಕ್ಕಳು
ಸುಮಾರು 5,577 ವಿದ್ಯಾರ್ಥಿಗಳಿಗೆ ಶೇ. 35 ರಿಂದ 33 ರವರೆಗೆ ಕೃಪಾಂಕ ನೀಡಿ ಉತ್ತೀರ್ಣಗೊಳಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವೆಬ್‌ಸೈಟ್ ಹಾಗೂ ಡಿಜಿ ಲಾಕರ್‌ನಲ್ಲಿ ಇಂದೇ ಅಂಕಪಟ್ಟಿಗಳು ಲಭ್ಯವಾಗುವಂತೆ ಮಾಡಲಾಗಿದೆ. ಇಂತಹ ಅದ್ಭುತ ಸಾಧನೆ ಮಾಡಿದ ರಾಜ್ಯದ ಸಮಸ್ತ ವಿದ್ಯಾರ್ಥಿಗಳಿಗೆ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ.



