ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ದೋರನಾಳು ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರ್ಮಿಕರಿದ್ದ ಬೊಲೆರೊ ಜೀಪ್, ರಸ್ತೆ ಬದಿಯಲ್ಲಿ ನಿಂತಿದ್ದ ಬೋರ್‌ವೆಲ್ ಲಾರಿಗೆ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಏಳು ಜನರಲ್ಲಿ ಓರ್ವ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಉಳಿದ ಆರು ಜನರನ್ನು ಕೂಡಲೇ ತರೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಎಲ್ಲರನ್ನೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಕಲ್ಲತ್ತಿಗಿರಿಯಿಂದ ಕೂಲಿ ಕೆಲಸ ಮುಗಿಸಿಕೊಂಡು ಎಂ.ಸಿ.ಹಳ್ಳಿಗೆ ಮರಳುತ್ತಿದ್ದ ಕಾರ್ಮಿಕರಿದ್ದ ಬೊಲೆರೊ ಜೀಪ್, ರಸ್ತೆ ಬದಿಯಲ್ಲಿ ನಿಂತಿದ್ದ ಬೋರ್‌ವೆಲ್ ಲಾರಿಗೆ ವೇಗವಾಗಿ ಡಿಕ್ಕಿ ಹೊಡೆದಿದೆ .
ಮೃತಪಟ್ಟವರು ಹಾಗೂ ಗಾಯಗೊಂಡವರು ಎಂ.ಸಿ.ಹಳ್ಳಿ ಮೂಲದವರಾಗಿದ್ದು, ನಿತ್ಯ ಕೂಲಿ ಕೆಲಸಕ್ಕಾಗಿ ಕಲ್ಲತ್ತಿಗಿರಿಗೆ ಹೋಗಿ ಬರುತ್ತಿದ್ದರು ಎನ್ನಲಾಗಿದೆ.
ಅಪಘಾತದಿಂದಾಗಿ ರಸ್ತೆಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



