Monday, January 12, 2026

ಕಸ ಎಸೆದವನಿಗೆ ‘ಸ್ವಚ್ಛತೆ’ ಪಾಠ: ವಾಹನ ನಂಬರ್ ಪತ್ತೆ ಹಚ್ಚಿ ಸ್ಥಳದಲ್ಲೇ ಫೈನ್ ಹಾಕಿದ BBMP!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಸ್ತೆ ಬದಿಯಲ್ಲಿ ಕಸ ಸುರಿಯುವ ಮೂಲಕ ಅಸ್ವಚ್ಛತೆ ಸೃಷ್ಟಿಸಿದ್ದ ನಾಗರಿಕರೊಬ್ಬರನ್ನು ಪತ್ತೆ ಹಚ್ಚಿ, ಬೆಂಗಳೂರು ಉತ್ತರ ನಗರ ಪಾಲಿಕೆ ವತಿಯಿಂದ 5,000ರೂ. ದಂಡ ವಿಧಿಸಲಾದ ಘಟನೆ ವರದಿಯಾಗಿದೆ.

ಬುಧವಾರದಂದು ಬೆಂಗಳೂರು ಉತ್ತರ ನಗರ ಪಾಲಿಕೆಯ ಸರ್ವಜ್ಞನಗರ ವಿಭಾಗದ ಕಲ್ಯಾಣ ನಗರ ವ್ಯಾಪ್ತಿಯಲ್ಲಿ, ಒಬ್ಬ ನಾಗರಿಕ ವಾಹನದಲ್ಲಿ ಬಂದು ರಸ್ತೆಯ ಬದಿಯಲ್ಲಿ ಕಸವನ್ನು ಸುರಿಯುತ್ತಿದ್ದ ದೃಶ್ಯವನ್ನು ಸ್ಥಳೀಯರೊಬ್ಬರು ವಿಡಿಯೋ ಚಿತ್ರೀಕರಿಸಿ ಪಾಲಿಕೆಗೆ ಕಳುಹಿಸಿಕೊಟ್ಟಿದ್ದರು. ಈ ವಿಡಿಯೋವನ್ನು ಗಮನಿಸಿದ ಪಾಲಿಕೆ ಆಯುಕ್ತರಾದ ಪಿ. ಸುನೀಲ್ ಕುಮಾರ್ ಅವರು ತಕ್ಷಣವೇ ವಾಹನದ ಮಾಹಿತಿಯನ್ನು ಪತ್ತೆ ಹಚ್ಚಲು ಅಧಿಕಾರಿಗಳಿಗೆ ಸೂಚಿಸಿದರು. ಅದರಂತೆ, ಸರ್ವಜ್ಞನಗರ ವಿಭಾಗದ ಘನತ್ಯಾಜ್ಯ ನಿರ್ವಹಣಾ ತಂಡವು ಪೊಲೀಸ್ ಸಿಬ್ಬಂದಿಯ ಸಹಕಾರದೊಂದಿಗೆ ವಾಹನದ ಮಾಲೀಕರ ವಿಳಾಸವನ್ನು ಪತ್ತೆ ಮಾಡಿದೆ.

ತಕ್ಷಣವೇ ಸ್ಥಳಕ್ಕೆ ತೆರಳಿದ ತಂಡವು ಆ ವ್ಯಕ್ತಿಗೆ 5,000 ರೂಪಾಯಿ ದಂಡ ವಿಧಿಸುವುದರ ಜೊತೆಗೆ, ಮತ್ತೊಮ್ಮೆ ಇಂತಹ ಕೃತ್ಯವನ್ನು ಮಾಡದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ನಾಗರಿಕರು ಜವಾಬ್ದಾರಿಯುತವಾಗಿ ವರ್ತಿಸಿ ನಗರವನ್ನು ಸ್ವಚ್ಛವಾಗಿಡಲು ಸಹಕರಿಸಬೇಕೆಂದು ಪಾಲಿಕೆ ಮನವಿ ಮಾಡಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!