April 4, 2026
Saturday, April 4, 2026
spot_img

ರಿಪ್ಪನ್‌ಪೇಟೆ ಭಾಗದಲ್ಲಿ ಒಂಟಿ ಸಲಗದ ಅಬ್ಬರ: ಕಾಡಾನೆ ಕಂಡ ಗ್ರಾಮಸ್ಥರಲ್ಲಿ ನಡುಕ

ಹೊಸದಿಗಂತ ಶಿವಮೊಗ್ಗ:

ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಸಮೀಪದ ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಕಾಡಾನೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆತಂಕಕ್ಕೊಳಗಾಗಿದ್ದಾರೆ.

ಗುಬ್ಬಿಗ ಗ್ರಾಮದ ಕಲ್ಲುಹಳ್ಳ ಎಂಬಲ್ಲಿ ಬೆಳಿಗ್ಗೆ ಸುಮಾರು 5:30ರ ಸುಮಾರಿಗೆ ಈ ಒಂಟಿ ಸಲಗ ಕಾಣಿಸಿಕೊಂಡಿದೆ. ನ್ಯಾಯಬೆಲೆ ಅಂಗಡಿಯ ಸಮೀಪ ಬಂದ ಆನೆಯು ನಂತರ ಅಲ್ಲಿಂದ ಅನೇಕರ ಮನೆಗಳ ಮುಂಭಾಗದಲ್ಲೇ ಸಾಗಿ ಹತ್ತಿರದ ತೋಟಗಳನ್ನು ಪ್ರವೇಶಿಸಿದೆ. ಬಳಿಕ ಹಾರೋಹಿತ್ಲು ಗ್ರಾಮದತ್ತ ಆನೆಯು ಹೆಜ್ಜೆ ಹಾಕಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಈ ಭಾಗದಲ್ಲಿ ಕಾಡಾನೆಗಳ ಸಂಚಾರ ಆಗೊಮ್ಮೆ ಈಗೊಮ್ಮೆ ಕಂಡುಬರುತ್ತದೆಯಾದರೂ, ಈ ಬಾರಿ ಜನವಸತಿ ಪ್ರದೇಶ ಮತ್ತು ಮನೆಗಳ ತೀರಾ ಹತ್ತಿರಕ್ಕೆ ಆನೆ ಬಂದಿರುವುದು ಜನರಲ್ಲಿ ಭೀತಿಯನ್ನು ಹೆಚ್ಚು ಮಾಡಿದೆ. ಸದ್ಯಕ್ಕೆ ತೋಟದ ಬೆಳೆಗಳಿಗಾಗಲಿ ಅಥವಾ ಜೀವಹಾನಿಯಾಗಲಿ ಸಂಭವಿಸಿದ ಬಗ್ಗೆ ಯಾವುದೇ ವರದಿಯಾಗಿಲ್ಲ. ಆದರೆ, ಮನೆಯ ಬಾಗಿಲಲ್ಲೇ ಆನೆ ಕಂಡುಬಂದಿರುವುದು ಗ್ರಾಮಸ್ಥರ ನಿದ್ದೆಗೆಡಿಸಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !